ಮಲ್ಲೂರಿನಲ್ಲಿ ಯುವಕನ ಕೊಲೆಯತ್ನ ಪ್ರಕರಣ: ಆರೋಪಿ ಸೆರೆ
ಮಂಗಳೂರು, ಜೂ.27: ಎರಡು ತಿಂಗಳ ಹಿಂದೆ ಮಲ್ಲೂರಿನಲ್ಲಿ ನಡೆದ ಕೊಲೆಯತ್ನ ಪ್ರಕರಣದ ಆರೋಪಿಯೊಬ್ಬನನ್ನು ದಕ್ಷಿಣ ಉಪವಿಭಾಗ ರೌಡಿ ನಿಗ್ರಹದಳ ಹಾಗೂ ಗ್ರಾಮಾಂತರ ಠಾಣಾ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಉಳಾಯಿಬೆಟ್ಟು ನಿವಾಸಿ ಅನ್ಸರ್ (20) ಬಂಧಿತ ಆರೋಪಿ.
ಈತ ಮಲ್ಲೂರಿನಲ್ಲಿ ಎರಡು ತಿಂಗಳ ಹಿಂದೆ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ. ಈ ಆರೋಪಿಯ ಮೇಲೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲೇ ದನಕಳ್ಳತನ, ಕೊಲೆಯತ್ನ ಸೇರಿದಂತೆ ಏಳು ಪ್ರಕರಣಗಳಿದ್ದು, 2012ರಿಂದ ತಲೆಮರೆಸಿಕೊಂಡಿದ್ದ. ಆರೋಪಿಗಾಗಿ ಹಲವು ಸಮಯದಿಂದ ಶೋಧ ನಡೆಸುತ್ತಿದ್ದರು. ಮಂಗಳೂರು ಸಮೀಪದ ಕಣ್ಣೂರು ಬಳಿಯಿರುವ ಬಗ್ಗೆ ಮಾಹಿತಿ ನಡೆದ ಗ್ರಾಮಾಂತರ ಪೊಲೀಸರು ರೌಡಿ ನಿಗ್ರಹದಳದ ಜತೆಗೂಡಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಡಿಸಿಪಿಗಳಾದ ಹನುಮಂತರಾಯ, ಲಕ್ಷ್ಮೀಗಣೇಶ್ ನಿರ್ದೇಶನದಂತೆ ಮಂಗಳೂರು ದಕ್ಷಿಣ ಉಪವಿಭಾಗ ಎಸಿಪಿ ರಾಮರಾವ್ ಮಾರ್ಗದರ್ಶನದಲ್ಲಿ ಮಂಗಳೂರು ಗ್ರಾಮಾಂತರ ಇನ್‌ಸ್ಪೆಕ್ಟರ್ ಸಿದ್ದಗೌಡ ಭಜಂತ್ರಿ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.