ವೆನ್‌ಲಾಕ್ ಆಸ್ಪತ್ರೆಯ ಬಗ್ಗೆ ದೂರುಗಳ ಮಹಾಪೂರ: 24 ಖಾಸಗಿ ಆಸ್ಪತ್ರೆಗಳ ಜತೆ ಶೀಘ್ರ ಸಭೆಗೆ ನಿರ್ಧಾರ
ಮಂಗಳೂರು, ಜೂ.27: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣದಿಂದ ಕಳೆದ ಸುಮಾರು ಐದು ತಿಂಗಳ ಬಳಿಕ ಇಂದು ನಿಗದಿಯಾದ ಜಿ.ಪಂ. ಸಾಮಾನ್ಯ ಸಭೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಸದಸ್ಯರಿಂದ ಅಹವಾಲು ಸಲ್ಲಿಕೆಯ ಸಭೆಯಾಗಿ ಮಾರ್ಪಟ್ಟಿತ್ತು.
ಸಾಮಾನ್ಯ ಸಭೆಗೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹಾಜರಾಗಿ, ನನಗೆ ಜಿಲ್ಲಾ ಪಂಚಾಯತ್ ಸದಸ್ಯರಿಂದ ಯಾವುದೇ ಸಮಸ್ಯೆಗಳು ಬಾರದ ಕಾರಣ ನಾನೇ ಸಭೆಗೆ ಹಾಜರಾಗಿರುವುದಾಗಿ ಹೇಳಿದರು. ಈ ಸಂದರ್ಭವನ್ನು ಉಪಯೋಗಿಸಿಕೊಂಡ ಸದಸ್ಯರೆಲ್ಲರೂ ಹಲವು ಅಹವಾಲು, ಸಮಸ್ಯೆಗಳನ್ನು ತೆರೆದಿಟ್ಟರು. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯರಿಂದ ಮುಖ್ಯವಾಗಿ ವೆನ್‌ಲಾಕ್ ಆಸ್ಪತ್ರೆಯ ಕುರಿತಂೆಯೇ ದೂರುಗಳು ವ್ಯಕ್ತವಾದವು.
ವೆನ್‌ಲಾಕ್ ಆಸ್ಪತ್ರೆಯಲ್ಲಿ ಆರೋಗ್ಯಶ್ರೀ, ಆಯುಷ್ಮಾನ್ ಭಾರತ್ ಮೊದಲಾದ ಯೋಜನೆಗಳಡಿ ಚಿಕಿತ್ಸೆ ಪಡೆಯಲು ರೋಗಿಗಳು ಪರದಾಡಬೇಕಾಗುತ್ತದೆ. ಜನಪ್ರತಿನಿಧಿಗಳು ಮೇಲಧಿಕಾರಿಗಳ ಗಮನಕ್ಕೆ ತಂದರೂ ನಿರ್ಲಕ್ಷ ವಹಿಸಲಾಗುತ್ತದೆ ಎಂಬುದಾಗಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಜನಾರ್ದನ ಗೌಡ, ವಿನೋದ್ ಕುಮಾರ್, ಶಾಹುಲ್ ಹಮೀದ್, ಮಮತಾ ಗಟ್ಟಿ, ಧನಲಕ್ಷ್ಮಿ, ಮುಹ್ಮುದ್ ಮೊದಲಾದವರು ದೂರಿದರು.
ಈ ಸಂದರ್ಭ ಸಭೆಯಲ್ಲಿ ವೆನ್‌ಲಾಕ್ ಡಿಎಂಒ ರಾಜೇಶ್ವರಿ ದೇವಿ ಅನುಪಸ್ಥಿತರಿದ್ದು, ಅವರನ್ನು ಸಭೆಗೆ ಕರೆಸಲಾಯಿತು.
ಸದಸ್ಯರ ದೂರುಗಳಿಗೆ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಮುಂದಿನ ವಾರ ಜಿಲ್ಲಾಧಿಕಾರಿಯ ಉಪಸ್ಥಿತಿಯಲ್ಲಿ ವಿವಿಧ ಸರಕಾರಿ ಯೋಜನೆಗಳು ಲಭ್ಯವಿರುವ ಜಿಲ್ಲೆಯ 24 ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು, ಜಿಲ್ಲಾ ಆರೋಗ್ಯಾಧಿಕಾರಿ, ಆರೋಗ್ಯ ಇಲಾಖೆಯ ಕಾರ್ಯದರ್ಶಿಯನ್ನು ಕರೆಯಿಸಿ ಸಭೆ ಡೆಸುವುದಾಗಿ ಭರವಸೆ ನೀಡಿದರು.
ಆಯುಷ್ಮಾನ್ ಯೋಜನೆಗೆ ಸಂಬಂಧಿಸಿ 169 ತುರ್ತು ಚಿಕಿತ್ಸೆಗಳಿಗೆ ಸಂಬಂಧಿಸಿ ಖಾಸಗಿ ಆಸ್ಪತ್ರೆಯಲ್ಲಿ ಬಡ ರೋಗಿಗೆ ಚಿಕಿತ್ಸೆ ಒದಗಿಸಬೇಕಾದರೆ ವೆನ್‌ಲಾಕ್ ಆಸ್ಪತ್ರೆಯಿಂದ ಶಿಫಾರಸ್ಸು ಪತ್ರಕ್ಕಾಗಿ ರೋಗಿ ಅಥವಾ ಅವರ ಕುಟುಂಬವನ್ನು ಅಲೆದಾಡಿಸಬಾರದು. ಶಿಫಾರಸ್ಸಿನ ಅಗತ್ಯವಿದ್ದಲ್ಲಿ ಒದಗಿಸಬೇಕು. ಜಿಲ್ಲಾಸ್ಪತ್ರೆಯಾದ ವೆನ್‌ಲಾಕ್ ಆಸ್ಪತ್ರೆಯಲ್ಲಿ ಯಾವುದೇ ರೀತಿಯ ಸೌಲಭ್ಯ ಲಭ್ಯವಿಲ್ಲದಾಗ, ವ್ಯವಸ್ಥೆ ಇರುವ ಆಸ್ಪತ್ರೆಗೇ ರೋಗಿಯನ್ನು ಕಳುಹಿಸಬೇಕು. ಮಾತ್ರವಲ್ಲದೆ, ಆರೋಗ್ಯ ಮಿತ್ರನ ಮೂಲಕ ರೋಗಿ ಅಥವಾ ಅವರ ಕುಟುಂಬಕ್ಕೆ ಸಂಪೂರ್ಣ ಮಾಹಿತಿಯನ್ನು ಒದಗಿಸುವ ವ್ಯವಸ್ಥೆಯನ್ನು ಮಾಡಬೇಕು ಎಂದು ಡಿಎಂಒಗೆ ನಿರ್ದೇಶನ ನೀಡಿದರು.
ವೆನ್‌ಲಾಕ್ ಆಸ್ಪತ್ರೆಯಲ್ಲಿ ಬಡ ರೋಗಿಗಳ ತುರ್ತು ಚಿಕಿತ್ಸೆಗಾಗಿ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿದಾಗ ಸೂಕ್ತ ಸ್ಪಂದನ ದೊರೆಯುವುದಿಲ್ಲ ಎಂಬ ಸದಸ್ಯರ ದೂರಿಗೆ ಪ್ರತಿಕ್ರಿಯಿಸಿದ ಸಚಿವ ಯು.ಟಿ.ಖಾದರ್, ಜಿಲ್ಲಾಸ್ಪತ್ರೆಯ ಸಮಿತಿಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರನ್ನು ಕೂಡಾ ಸೇರ್ಪಡೆಗೊಳಿಸಲಾಗುವುದು. ಯಾವುದೇ ಯೋಜನೆಗಳಿಗೆ ಸಂಬಂಧಿಸಿ ಕಾನೂನಾತ್ಮಕ ಬದಲಾವಣೆ ಆಗಬೇಕಿದ್ದಲ್ಲಿ ಅದನ್ನು ಸಂಬಂಧಪಟ್ಟ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿ ಕ್ರವು ಕೈಗೊಳ್ಳಲಾಗುವುದು ಎಂದರು.
ವಿವಿಧ ಯೋಜನೆಗಳಿಗೆ ಒಳಪಡುವ ಆಸ್ಪತ್ರೆಗಳಲ್ಲಿ ಯಾವೆಲ್ಲಾ ಚಿಕಿತ್ಸೆಗಳು ರೋಗಿಗಳಿಗೆ ಲಭ್ಯವಿದೆ ಹಾಗೂ ಆರೋಗ್ಯ ಮಿತ್ರಗೆ ಸಂಬಂಧಿಸಿ ಕಿರು ಪುಸ್ತಕವನ್ನು ತಯಾರಿಸಿ ಎಲ್ಲಾ ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ತಾ.ಪಂ. ಅಧ್ಯಕ್ಷರಿಗೆ ಒದಗಿಸುವಂತೆಯೂ ಆರೋಗ್ಯ ಇಲಾಖೆಗೆ ಸಚಿವು ಈ ಸಂದರ್ಭ ಸೂಚನೆ ನೀಡಿದರು.
ಸಭೆಯಲ್ಲಿ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅನಿತಾ ಹೇಮನಾಥ್,ಯು.ಪಿ. ಇಬ್ರಾಹೀಂ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೆಲ್ವಮಣಿ ಉಪಸ್ಥಿತರಿದ್ದರು.