15 ದಿನಗಳಿಗೊಮ್ಮೆ ಹೋಬಳಿ ಮಟ್ಟದ ಜನಸಂಪರ್ಕ ಸಭೆ: ಸಚಿವ ಖಾದರ್
ಮಂಗಳೂರು : ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಸಹಾಯಕ ಆಯುಕ್ತರ ನೇತೃತ್ವದಲ್ಲಿ ಹೋಬಳಿ ಮಟ್ಟದಲ್ಲಿ 15 ದಿನಗಳಿಗೊಮ್ಮೆ ಜನ ಸಂಪರ್ಕ ನಡೆಸುವಂತೆ ತಹಶೀಲ್ದಾರ್‌ಗೆ ಮನವಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಸಲಹೆ ನೀಡಿದ್ದಾರೆ.
ಅವರು ಇಂದು ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದ ಸಂದರ್ಭ ಸದಸ್ಯರಾದ ತುಂಗಪ್ಪ ಬಂಗೇರ ಅವರು ವಿಷಯ ಪ್ರಸ್ತಾಪಿಸುತ್ತಾ, ಜನ ಸಂಪರ್ಕ ಸಭೆಯನ್ನು ನಿಲ್ಲಿಸಲಾಗಿದೆ. ಕಂದಾಯ ಸಂಪರ್ಕ ಸಭೆಯನ್ನು ನಡೆಸಲಾಗುತ್ತಿದೆ ಯಾದರೂ ಸಮಸ್ಯೆಗಳು ಇತ್ಯರ್ಥವಾಗುತ್ತಿಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಜನ ಸಂಪರ್ಕ ಸಭೆಯನ್ನು ಮುಂದುವರಿಸಲು ತಾನು ನಿರ್ದೇಶನ ನೀಡುವುದಾ ಹೇಳಿದರು. ಜನಸಂಪರ್ಕ ನಡೆಸದಿದ್ದಲ್ಲಿ ತನ್ನ ಗಮನಕ್ಕೆ ತರುವಂತೆಯೂ ಅವರು ಸದಸ್ಯರಿಗೆ ತಿಳಿಸಿದರು.
ಸದಸ್ಯ ವಿನೋದ್ ಕುಮಾರ್ ಮಾತನಾಡಿ, 94 ಸಿಸಿಯಡಿ ಹಕ್ಕುಪತ್ರಕ್ಕೆ ಮೂಡಾದಿಂದ ಎನ್‌ಒಸಿ ಪತ್ರವನ್ನು ಕೇಳಲಾಗುತ್ತಿದೆ. ಇದರಿಂದ ಗ್ರಾಮೀಣ ಪ್ರದೇಶದ ಜನರು ಮೂಡಾಕ್ಕೆ ಅಲೆದಾಡುವಂತಾಗಿದೆ. ಇಲ್ಲಿ ಬ್ರೋಕರ್‌ಗಳ ಹಾವಳಿಯಿಂದಾಗಿ ಜನಸಾಮಾನ್ಯರು ಪರಿತಪಿಸಬೇಕಾಗುತ್ತದೆ ಎಂದು ದೂರಿದರು
ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾತನಾಡಿ, ಹಕ್ಕುಪತ್ರಕ್ಕೆ ಎನ್‌ಒಸಿ ಅಗತ್ಯವಿಲ್ಲವೆಂದು ಮೂಡಾದವರು ಹೇಳಿದ್ದಾರೆ. ಈಬಗ್ಗೆ ಅವರಿಂದ ಲಿಖಿತವಾಗಿ ಪತ್ರ ಕೇಳಲಾಗಿದೆ ಎಂದರು.
ಸಚಿವ ಖಾದರ್ ಮಾತನಾಡಿ, ಮೂಡಾದಿಂದ ಪರವಾನಿಗೆಯನ್ನು ಪಡೆಯಲು ಆನ್‌ಲೈನ್ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಲಿದೆೆ. ಮುಂದೆ ಇಂತಹ ಸಮಸ್ಯೆಗಳು ಉದ್ಭವಿಸುವುದಿಲ್ಲ ಎಂದರು.
ಶಾಲೆಗಳ ರಿಪೇರಿಗೆ ಸ್ಥಳೀಯ ಶಾಸಕರಿಂದ ಅನುದಾನಕ್ಕೆ ಮನವಿಗೆ ಸಲಹೆ
ಮಳೆಯ ಸಂದರ್ಭ ಶಾಲೆಗಳಲ್ಲಿ ಸೋರಿಕೆ ಉಂಟಾಗುತ್ತಿದ್ದು, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಇದಕ್ಕೆ ಅನುದಾನ ಒದಗಿಸುವಂತೆ ಸದಸ್ಯರಾದ ಸುಚರಿತ ಶೆಟ್ಟಿ ಸಭೆಯ ಗಮನ ಸೆಳೆದಾಗ, ಪ್ರಾಕೃತಿಕ ವಿಕೋಪದಡಿ ಶಾಸಕರಿಗೆ ತಲಾ 6 ಕೋಟಿ ರೂ.ಗಳನ್ನು ಕಳೆದ ವರ್ಷ ನೀಡಲಾಗಿದೆ. ನಾನುಕೂಡಾ ನನ್ನ ವ್ಯಾಪ್ತಿಯ ಕೆಲ ಶಾಲೆಗಳಲ್ಲಿ ದುರಸ್ತಿ ಕಾರ್ಯಕ್ಕೆ ಈ ಅನುದಾನವನ್ನು ಒದಗಿಸಿದ್ದೇನೆ. ನಿಮ್ಮ ವ್ಯಾಪ್ತಿಯ ಶಾಸಕರಲ್ಲಿ ಅನುದಾನ ಒದಗಿಸುವಂತೆ ಮನವಿ ಮಾಡಿ ಎಂದು ಸಚಿವ ಖಾರ್ ಸದಸ್ಯರಿಗೆ ಸಲಹೆ ಮಾಡಿದರು.
ನದಿ, ಕೆರೆ, ತೋಡುಗಳ ಹೂಳೆತ್ತಲು ಅವಕಾಶ ನೀಡಿ !
ಮಳೆಗಾಲದಲ್ಲಿ ಮತ್ತೆ ಮರಳಿನ ಕೊರತೆ ಸಮಸ್ಯೆ ಕಾಡುತ್ತಿದೆ ಎಂದು ಸದಸ್ಯರಾದ ಕೊರಗಪ್ಪ ನಾಯ್ಕ ತಿಳಿಸಿದರೆ, ನದಿ ತೋಡು, ಕೆರಗಳಲ್ಲಿ ತುಂಬಿರುವ ಹೂಳನ್ನು ತೆಗೆಯಲು ಮುಂದಾದಾಗ ಸ್ಥಳೀಯ ಅಧಿಕಾರಿಗಳು ನಿರಾಕರಿಸುತ್ತಾರೆ. ನದಿಗಳು ಹೂಳು ತುಂಬಿ ನೀರು ಇಂಗುವುದಿಲ್ಲ. ಇದರಿಂದ ಕೃತಕ ನೆರೆ ಸಂಭವಿಸುತ್ತದೆ ಎಂದು ಆಕ್ಷೇಪಿಸಿದರು.
9 ಗ್ರಾಮ ಪಂಚಾಯ್‌ಗಳಲ್ಲಿ ಸಣ್ಣ ದಿಣ್ಣೆಗಳ ಹೂಳು (ಮರಳು) ತೆಗೆಯಲು ಅಧಿಕಾರ ನೀಡಲಾಗಿದೆ. ನದಿ, ಕೆರೆಗಳು ರಾಷ್ಟ್ರೀಯ ಸಂಪತ್ತು ಆದ ಕಾರಣ, ಯಾವುದೇ ರೀತಿಯ ಬದಲಾವಣೆ ಮಾಡಬೇಕಾಗಿದ್ದರೂ ಕೇಂದ್ರ ಪರಿಸರ ಇಲಾಖೆಯಿಂದ ಅನುಮತಿ ಬೇಕು. ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸಚಿವ ಮೂಲಕ ಪರಿಹಾರ ಪಡೆಯಬೇಕಾಗುತ್ತೆ ಎಂದು ಸಚಿವ ಖಾದರ್ ಹೇಳಿದರು.
ಭೂ ಮತ್ತು ಗಣಿ ಇಲಾಖೆ ಅಧಿಕಾರಿಗೆ ಶೋಕಾಸು ನೋಟೀಸು !
ಸಭೆಯಲ್ಲಿ ಭೂ ಮತ್ತು ಗಣಿ ಇಲಾಖೆ ಅಧಿಕಾರಿ ಗೈರು ಹಾಜರಾದ ಬಗ್ಗೆ ಸದಸ್ಯರು ಆಕ್ಷೇಪಿಸಿದರು. ಪ್ರತಿ ಸಭೆಗೂ ಈ ಇಲಾಖೆಯ ಹಿರಿಯ ಅಧಿಕಾರಿಗಳು ಗೈರಾಗಿರುತಾ್ತರೆ ಎಂದು ಸದಸ್ಯರು ದೂರಿದರು.
ಉಪಸ್ಥಿತರಿದ್ದ ಇಲಾಖೆಯ ಕಿರಿಯ ಅಧಿಕಾರಿಯೊಬ್ಬರನ್ನು ಪ್ರಶ್ನಿಸಿದಾಗ, ಹಿರಿಯ ಅಧಿಕಾರಿಗಳು ನ್ಯಾಯಾಲಯದ ಕಾರ್ಯಕ್ಕೆ ತೆರಳಿರುವುದಾಗಿ ಉತ್ತರಿಸಿದರು.
ಸಚಿವ ಖಾದರ್ ಪ್ರತಿಕ್ರಿಯಿಸಿ, ಜಿ.ಪಂ. ಸಾಮಾನ್ಯ ಸಭೆ ಹಾಗೂ ಕೆಡಿಪಿ ಸಭೆ ಅತ್ಯಂತ ಪ್ರಮುಖವಾದದ್ದು. ಅದಕ್ಕೆ ಸಂಬಂಧಪಟ್ಟ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಜರಿರಬೇಕು. ತುರ್ತು ಸಂದರ್ಭಗಳಲ್ಲಿ ಅನ್ಯ ಕಾರ್ಯದ ನಿಮಿತ್ತ ಗೈರು ಹಾಜರಾದಾಗ ಈ ಬಗ್ಗೆ ಅಧ್ಯಕ್ಷರು ಅಥವಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಮನಕ್ಕೆ ತರಬೇಕು. ಹಾಗಾಗಿ ಇಂದು ಗೈರುಹಾಜರಾದ ಇಲಾಖೆಯ ಅಧಿಕಾರಿಗೆ ಶೋಕಾಸು ನೋಟೀಸು ಜಾರಿಗೊಳಿಸಿ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಸೂಚಿಸಿದರು.