×
Ad

ಮೂಡುಬಿದಿರೆ ಪುರಸಭೆಯಿಂದ ನ್ಯಾಯಾಂಗ ನಿಂದನೆ: ದೂರು

Update: 2019-06-27 22:57 IST

ಮೂಡುಬಿದಿರೆ: ಇಲ್ಲಿನ ಪುರಸಭಾ ಮಾರುಕಟ್ಟೆ ಕಟ್ಟಡದ ಕಾಮಗಾರಿಯನ್ನು ನಿಲ್ಲಿಸುವಂತೆ ಕರ್ನಾಟಕ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶವನ್ನು ಉಲ್ಲಂಘಿಸಿ, ಕಾಮಗಾರಿ ನಡೆಸುತ್ತಿರುವ ಬಗ್ಗೆ ಅರ್ಜಿದಾರ ಜೈಸನ್ ತಾಕೊಡೆ ಅವರು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

ಸಂರಕ್ಷಿತ ಸ್ಮಾರಕ ಮೂಡುಬಿದಿರೆ ಚೌಟರ ಅರಮನೆಯ ಸಮೀಪ ನಿರ್ಮಾಣವಾಗುತ್ತಿರುವ ಮೂಡುಬಿದಿರೆ ಮಾರುಕಟ್ಟೆ ಕಾಮಗಾರಿಗೆ ಹೈಕೋರ್ಟ್ ಜೂನ್ 11ರಂದು ಮಧ್ಯಾಂತರ ತಡೆ ನೀಡಿದ್ದರೂ, ಮಾರ್ಕೆಟ್ ಕಾಮಗಾರಿ ನಡೆಸಲಾಗುತ್ತಿದ್ದು, ಇದನ್ನು ಕೂಡಲೇ ನಿಲ್ಲಿಸುವಂತೆ ಪುರಸಭೆಗೆ ನಿರ್ದೇಶನ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ.

ಯಾವುದೇ ಸಂರಕ್ಷಿತ ಸ್ಮಾರಕದ 100 ಮೀಟರ್ ವ್ಯಾಪ್ತಿಯೊಳಗೆ ಯಾವುದೇ ನಿರ್ಮಾಣ ಕಾಮಗಾರಿ ನಡೆಸುವಂತಿಲ್ಲ. ಅದೇ ರೀತಿ ಸಂರಕ್ಷಿತ ಪ್ರದೇಶದ 200 ಮೀಟರ್ ವ್ಯಾಪ್ತಿಯೊಳಗೆ ನಿರ್ಮಾಣ ಕಾಮಗಾರಿ ಕೈಗೊಳ್ಳಬೇಕಾದರೆ ಪುರಾತತ್ವ ಇಲಾಖೆಯ ಅನುಮತಿ ಪಡೆಯಬೇಕು. ಆದರೆ ಈ ಪ್ರಕರಣದಲ್ಲಿ ಪುರಾತತ್ವ ಇಲಾಖೆಯ ಅನುಮತಿ ಸಿಗದಿದ್ದರೂ ಕಾಮಗಾರಿ ಆರಂಭಿಸಲಾಗಿದೆ. ಆದ್ದರಿಂದ ಕಾಮಗಾರಿಗೆ ತಡೆ ನೀಡಬೇಕು ಎಂದು ಪತ್ರಕರ್ತ ಜೈಸನ್ ತಾಕೊಡೆ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾ| ಎಚ್.ಟಿ. ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಮಧ್ಯಾಂತರ ಆದೇಶ ನೀಡಿದ್ದು ಸಂರಕ್ಷಿತ ಪ್ರದೇಶಗಳನ್ನು ಕಾಪಾಡುವುದು ಸಾರ್ವಜನಿಕ ಹಿತಾಸಕ್ತಿಯ ಆದ್ಯತೆಗಳಲ್ಲಿ ಒಂದು ಎಂದು ಅಭಿಪ್ರಾಯಪಟ್ಟು, ಕಾಮಗಾರಿ ನಿಲ್ಲಿಸುವಂತೆ ಮೂಡುಬಿದಿರೆ ಪುರಸಭೆಗೆ ಮಧ್ಯಂತರ ಆದೇಶ ನೀಡಿತ್ತು. ಪುರಾತತ್ವ ಇಲಾಖೆಯವರು ವಿವಾದಿತ ಪ್ರದೇಶದ ಸರ್ವೇ ಕಾರ್ಯ ನಡೆಸಿ ನಾಲ್ಕು ವಾರಗಳಲ್ಲಿ ವರದಿ ಸಲ್ಲಿಸಬೇಕು ಎಂದು ಸರಕಾರಕ್ಕೆ ನಿರ್ದೇಶನ ನೀಡಿ, ವಿಚಾರಣೆಯನ್ನು ಮುಂದೂಡಿದೆ.

ಕರ್ನಾಟಕ ಹೈಕೋರ್ಟ್ ಕಾಮಗಾರಿ ನಡೆಸದಂತೆ ಮಧ್ಯಾಂತರ ಆದೇಶ ನೀಡಿದ್ದರೂ, ಅದನ್ನು ಉಲ್ಲಂಘಿಸಿ ಕಾಮಗಾರಿ ನಡೆಸುತ್ತಿರುವ ಛಾಯಾಚಿತ್ರಗಳೊಂದಿಗೆ ಬಗ್ಗೆ ಅರ್ಜಿದಾರರು ದೂರು ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News