ಮಂಗಳೂರು: ಓಶಿಯನ್ ಪರ್ಲ್‌ನಲ್ಲಿ ಬಲೂಚಿಸ್ತಾನ್ ಆಹಾರ ಉತ್ಸವ
ಮಂಗಳೂರು : ನಗರದ ಓಶಿಯನ್ ಪರ್ಲ್‌ನ ಕೋರಲ್ ಫೈನ್ ಡೈನ್ ರೆಸ್ಟೋರೆಂಟ್‌ನಲ್ಲಿ ಬಲೂಚಿಸ್ತಾನ್ ಆಹಾರ ಉತ್ಸವ ಆರಂಭಗೊಂಡಿದ್ದು ಜುಲೈ 25ರವರೆಗೆ ಮುಂದುವರಿಯಲಿದೆ. ಈ ಸಂದರ್ಭದಲ್ಲಿ ಇಲ್ಲಿನ ಪರಿಣತ ಬಾಣಸಿಗರು ತಯಾರಿಸಿದ ಬಲೂಚಿಸ್ತಾನದ ವೈವಿಧ್ಯಮಯ ಹಾಗೂ ಸ್ವಾದಿಷ್ಟ ಖಾದ್ಯಗಳನ್ನು ಇಲ್ಲಿ ಸವಿಯಬಹುದು.
ಬಲೂಚಿಸ್ತಾನದ ಸಾಂಪ್ರದಾಯಿಕ ವೆಲ್‌ಕಮ್ ಡ್ರಿಂಕ್ ತುಕ್‌ಮಲಂಗ ಕಾ ಶರಬತ್ ನಿಂದ ಪ್ರಾರಂಭಿಸಿ ಹಲವು ಸಸ್ಯಾಹಾರಿ ಹಾಗೂ ಮಾಂಸಾಹಾರಿ ವೈವಿಧ್ಯಮಯ, ಸವಿರುಚಿಯ ಖಾದ್ಯಗಳು ಆಹಾರ ಉತ್ಸವದಲ್ಲಿ ಲಭ್ಯ ಇವೆ.
ಮಾಂಸಾಹಾರಿ ಖಾದ್ಯಗಳಲ್ಲಿ ಝಫ್ರನಿ ಮಾಹಿ (ಕೇಸರಿ, ಗೇರುಬೀಜದೊಂದಿಗೆ ಬೇಯಿಸಲಾದ ಮೀನಿನ ತುಂಡುಗಳು), ಮಿರ್ಚಿ ಕಿ ಮಚಲಿ (ತಂದೂರ್‌ನಲ್ಲಿ ಹಳದಿ ಮೆಣಸಿನ ಹುಡಿ ಹಾಗೂ ಸುವಾಸನೆಭರಿತ ಗಿಡಮೂಲಿಕೆಯೊಂದಿಗೆ ಬೇಯಿಸಿದ ಮೀನು), ಇರಾನಿ ಸಿಗಡಿ (ಕ್ಲೇ ಓವನ್‌ನಲ್ಲಿ ಕೆಂಪು ಮೆಣಸು, ಜೀರಿಗೆಯೊಂದಿಗೆ ತಯಾರಿಸಿದ ಸಿಗಡಿ) ಮುರ್ಗ್ ಬಲೂಚಿ ಕಬಾಬ್ , ಸಾಜಿ ಚಿಕನ್, ಸಿಕಂದರಿ ರಾನ್, ಬರ್ರಾ ಕಬಾಬ್, ಗೋಶ್ತ್ ಗಲ್ಲೌಟಿ ಕಬಾಬ್, ಕೋಫ್ತೆ ಕಬಾಬ್, ಜಿಂಗಾ ಕಾ ಸಲನ್, ಮುರ್ಗ್ ಕುಷ್ಕ್ ಪುರ್ದಾ, ಮುರ್ಗ್ ಹಂಡಿ ಕೊರ್ಮ, ಗೋಶ್ತ್ ನಿಹಾರಿ ಕೊರ್ಮಾ, ಕಂದಹಾರಿ ಲ್ಯಾಂಬ್ ಮತ್ತಿತರ ವೈವಿಧ್ಯಮಯ ಖಾದ್ಯಗಳು ಮಾಂಸಾಹಾರಿ ವಿಭಾಗಗಳಲ್ಲಿ ಲಭ್ಯವಿದೆ.
ಸಸ್ಯಾಹಾರಿ ವಿಭಾಗದಲ್ಲಿ ರಾಜ್‌ಮಾ ಕಿ ಗಲೌಟಿ, ಖಮ್ ಖತೈ, ಮಟರ್ ಔರ್ ಮುಂಗ್‌ಫಲಿ ಕೆ ಕಬಾಬ್, ಭರ್ವಾನ್ ಧಿಂಗ್ರಿ, ಆಲೂ ಬುಕಾರಾ ಕೋಫ್ತ, ಮಶ್ ಖಲಿಯಾ, ಗುಂಚಾ - ವಾ - ಖೀಮಾ, ದಮ್ ಕಿ ದಾಲ್ ಮತ್ತಿತರ ಸ್ವಾದಿಷ್ಟಕರ ಹಾಗೂ ಆರೋಗ್ಯಕರ ಖಾದ್ಯಗಳು ಆಹಾರ ಉತ್ಸವದಲ್ಲಿದೆ.
ಇದರ ಜತೆಯಲ್ಲೇ ಸೂಪ್, ವಿವಿಧ ರೀತಿಯ ಬಿರಿಯಾನಿಗಳು , ರೊಟ್ಟಿಗಳ ಜೊತೆ ಸೇಮಿಯಾ ಜರ್ದಾ, ಕೇಸರಿ ಫಿರ್ನಿ, ಶಹಿ ತುಕುಡಾ, ಕುಲ್ಫಿ ಫಾಲೂದಾ ಮತ್ತಿತರ ಡೆಸರ್ಟ್‌ಗಳು ಕೂಡ ಲಭ್ಯವಿದೆ. ಆಹಾರ ಪ್ರಿಯರು ಆಹಾರ ಉತ್ಸವದ ದಿನಗಳಂದು ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ಹಾಗೂ ರಾತ್ರಿ 7ರಿಂದ 11 ಗಂಟೆಯವರೆಗೆ ವೈವಿಧ್ಯಮಯ ತಿಂಡಿ ತಿನಿಸುಗಳ ರುಚಿಯನ್ನು ಸವಿಯಬಹುದಾಗಿದೆ. ಮಾಂಸಾಹಾರ ಅಡುಗೆ ಹಲಾಲ್ ಆಗಿರುತ್ತದೆ ಎಂದು ಪ್ರಕಟನೆ ತಿಳಿಸಿದೆ.
ಆಹಾರ ಪ್ರಿಯರಿಗೆ ವಿಭಿನ್ನ ರುಚಿ ನೀಡುವ ಆಹಾರ ಉತ್ಸವ
ಮಂಗಳೂರು ಸೇರಿದಂತೆ ಜಿಲ್ಲೆಯ ಆಹಾರ ಪ್ರಿಯರಿಗೆ ದೇಶ ವಿದೇಶಗಳ ವಿಶೇಷ ಅಡುಗೆಗಳನ್ನು ಉಣಬಡಿಸುವುದೇ ಈ ಆಹಾರ ಮೇಳದ ಉದ್ದೇಶ. ಪ್ರತಿ ತಿಂಗಳು, ಎರಡು ತಿಂಗಳಿಗೊಮ್ಮೆ ವಿಭಿನ್ನ ಆಹಾರ ಉತ್ಸವವನ್ನು ಆಯೋಜಿಸಲಾಗುತ್ತದೆ. ಇದೀಗ ಬಲೂಚಿಸ್ತಾನದ ಸ್ವಾದಿಷ್ಟಕರ ಖಾದ್ಯಗಳ ಆಹಾರ ಉತ್ಸವ ನಡೆಯುತ್ತಿದೆ. ಬಿರಿಯಾನಿ, ಕಬಾಬ್, ಸೂಪ್ ಸೇರಿದಂತೆ ವೈವಿಧ್ಯಮಯ ಖಾದ್ಯಗಳನ್ನು ಆಹಾರ ಪ್ರಿಯರು ಸವಿಯಬಹುದಾಗಿದೆ. ಕೆಲ ದಿನಗಳ ಹಿಂದಷ್ಟೇ ರಂಝಾನ್ ತಿಂಗಳು ಮುಗಿದಿದೆ. ಮುಸ್ಲಿಮರು ವಿಶಿಷ್ಟ ಖಾದ್ಯಗಳ ರುಚಿ ನೋಡುವ ನಿರೀಕ್ಷೆಯಲ್ಲಿದ್ದಾರೆ. ವಿಶೇಷವಾಗಿ ಅವರಿಗೆ ಈ ಬಲೂಚಿಸ್ತಾನ್ ಆಹಾರ ಉತ್ಸವ ವಿಶೇಷ ಅನುಭವ ನೀಡಲಿದೆ.
-ಗಿರೀಶ್, ಉಪಾಧ್ಯಕ್ಷರು, ಓಶಿಯನ್ ಪರ್ಲ್