ಕಾನೂನು ರಕ್ಷಣೆಯ ಹೆಸರಿನಲ್ಲಿ ಶಾಲಾ ಮಕ್ಕಳ ವಾಹನ ಚಾಲಕರ ಮೇಲಿನ ದಾಳಿ ಖಂಡನೀಯ: ವೇದವ್ಯಾಸ್ ಕಾಮತ್

Update: 2019-06-28 06:44 GMT

ಮಂಗಳೂರು: ನಗರದಲ್ಲಿರುವ ಶಿಕ್ಷಣ ಸಂಸ್ಥೆಗಳಿಗೆ ಆಗಮಿಸುವ ಬಹುತೇಕ ವಿದ್ಯಾರ್ಥಿಗಳಿಗೆ ಆಸರೆಯಾಗಿರುವ ಶಾಲಾ ಮಕ್ಕಳ ವಾಹನ ಚಾಲಕರು ಮಕ್ಕಳ ಸುರಕ್ಷತೆಯನ್ನೇ ಧ್ಯೇಯವನ್ನಾಗಿಟ್ಟುಕೊಂಡು ಪ್ರಾಮಾಣಿಕವಾಗಿ ದುಡಿಯುತ್ತಿದ್ದರೂ, ಅವರ ಮೇಲೆ ಅಪನಂಬಿಕೆ ಬರುವಂತೆ ಪೋಲೀಸ್ ಇಲಾಖೆಯು ವರ್ತಿಸುತ್ತಿರುವುದು ಸರಿಯಲ್ಲ ಎಂದು ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ್ ಕಾಮತ್ ಅಭಿಪ್ರಾಯಪಟ್ಟರು.

ಅವರು ದ.ಕ.ಜಿಲ್ಲಾ ಶಾಲಾ ಮಕ್ಕಳ ವಾಹನ ಚಾಲಕರ ಸಂಘದ 3ನೇ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಾ, ಈ ಮಾತುಗಳನ್ನು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಂಘದ ಕಾನೂನು ಸಲಹೆಗಾರರೂ, ನಗರದ ಖ್ಯಾತ ವಕೀಲರಾದ ರಾಮ ಪ್ರಸಾದ್ ರವರು ಮಾತನಾಡುತ್ತಾ, ನ್ಯಾಯಾಲಯಗಳ ತೀರ್ಪುಗಳನ್ನು ಗೌರವಿಸುವುದು ಹಾಗೂ ಪಾಲನೆ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಯಾವುದೇ ಕಾನೂನುಗಳು ಜನರ ಒಳಿತಿಗಾಗಿ ಇರುವುದೇ ಹೊರತು ಅನ್ಯಾಯ ಮಾಡುವುದಕ್ಕಲ್ಲ. ಆದರೆ ಕೆಲವೊಂದು ಕಾನೂನುಗಳ ರಕ್ಷಣೆಯ ನೆಪದಲ್ಲಿ ಬಡಪಾಯಿಗಳ ಅಮಾಯಕರ ಮೇಲೆ ಸವಾರಿ  ನಡೆಸುವುದು ಪ್ರಜಾಪ್ರಭುತ್ವದ ಲಕ್ಷಣವಲ್ಲ.ಇಂತಹ ಸಂಧರ್ಭದಲ್ಲಿ ರಾಜ್ಯ ಹಾಗೂ ದೇಶವನ್ನಾಳುವ ಸರಕಾರಗಳು ತಕ್ಷಣ ಮಧ್ಯೆಪ್ರವೇಶಿಸಿ ನ್ಯಾಯ ಕಲ್ಪಿಸಲು ಸಾಧ್ಯವಾಗಬೇಕೆಂದು  ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಗೌರವ ಅಧ್ಯಕ್ಷರಾದ ಸುನಿಲ್ ಕುಮಾರ್ ಬಜಾಲ್ ರವರು, ಅನ್ಯಾಯ ದಬ್ಬಾಳಿಕೆಗಳ ವಿರುದ್ಧ ಸಿಡಿದೆದ್ದ  ಶಾಲಾ ಮಕ್ಕಳ ವಾಹನ ಚಾಲಕರು ಸಂಘಟಿತ ಶಕ್ತಿಯಾಗಿ ಹೊರಹೊಮ್ಮಿ ಕಳೆದ  3 ವರ್ಷಗಳಲ್ಲೇ ಅನೇಕ ಜನಪರ ಕಾರ್ಯಕ್ರಮಗಳ ಮೂಲಕ ಜನಮನ್ನಣೆ ಗಳಿಸಲಾಗಿದೆ.ಅಂತಹುದರಲ್ಲಿ ಶಾಲಾ ವಾಹನ ಚಾಲಕರನ್ನು ನಿಕ್ರಷ್ಠವಾಗಿ ಕಾಣುವ ಮೂಲಕ ಮತ್ತೆ ದಾಳಿ ನಡೆಸುತ್ತಿರುವುದು ಸರ್ವಥಾ ಸರಿಯಲ್ಲ. ಅದರ ಜೊತೆಗೆ ಆಳುವ ವರ್ಗಗಳ ನೀತಿಗಳೂ ಚಾಲಕ ವರ್ಗದ ವಿರುದ್ಧವಾಗಿದ್ದು ಮುಂದಿನ ದಿನಗಳಲ್ಲಿ ಪ್ರಬಲ ಹೋರಾಟವನ್ನು ರೂಪಿಸಬೇಕಾಗಿದೆ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಮೋಹನ್ ಕುಮಾರ್ ಅತ್ತಾವರ ವಹಿಸಿದ್ದರು. ವೇದಿಕೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಕಿರಣ್ ಲೇಡಿಹಿಲ್, ಜಿಲ್ಲಾ ಮುಖಂಡರಾದ ಉಮೇಶ್ ಶೆಟ್ಟಿ, ಶಂಕರ ಶೆಟ್ಟಿ, ಲೋಕೇಶ್ ಸುರತ್ಕಲ್, ಸತೀಶ್ ಪೂಜಾರಿ, ಪ್ರವೀಣ್, ಗಂಗಾಧರ್ ರೈ, ಚಿತ್ತರಂಜನ್ ಸುವರ್ಣ, ಸತೀಶ್ ಅಡಪ, ನರೇಂದ್ರ ಹೊಯಿಗೆಬೈಲ್, ಜಯರಾಮ, ಸಂಕಪ್ಪ ಉಳ್ಳಾಲ, ಸುನೀತ ಶಕ್ತಿನಗರ, ಹರೀಶ್ ಪುತ್ರನ್, ಬೆಂಜಮಿನ್, ದೇವರಾಜ್, ಚರಣ್, ರಾಜೇಶ್ ಕುಳಾಯಿ, ಮುನ್ನಾ ಪದವಿನಂಗಡಿ, ದೇವರಾಜ್, ರೆಹಮಾನ್ ಕುಂಜತ್ತಬೈಲ್, ಉದಯ, ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News