ಗೋರಕ್ಷಕರ ಗೂಂಡಾಗಿರಿಗೆ ಬ್ರೇಕ್ ಹಾಕಿದ ಮ. ಪ್ರದೇಶ ಸರಕಾರ: ಗರಿಷ್ಠ 5 ವರ್ಷ ಜೈಲು, ದಂಡ

Update: 2019-06-28 08:57 GMT

ಭೋಪಾಲ್, ಜೂ.28: ಗೋ ರಕ್ಷಣೆಯ ಹೆಸರಿನಲ್ಲಿ ನಡೆಯುವ ಗೂಂಡಾಗಿರಿಯನ್ನು ಮಟ್ಟ ಹಾಕಲು ಮಧ್ಯ ಪ್ರದೇಶದ ಕಾಂಗ್ರೆಸ್ ಸರಕಾರ ನಿರ್ಧರಿಸಿದೆ. ಇಂತಹ ಘಟನೆಗಳಲ್ಲಿ ತಪ್ಪಿತಸ್ಥರೆಂದು ಘೋಷಿಸಲ್ಪಟ್ಟವರಿಗೆ ಆರು ತಿಂಗಳಿನಿಂದ ಮೂರು ವರ್ಷಗಳ ತನಕ ಜೈಲು ಶಿಕ್ಷೆ ಹಾಗೂ 25,000 ರೂ.ಗಳಿಂದ 50,000 ರೂ.ವರೆಗೆ ದಂಡ ವಿಧಿಸಲು ಅನುವು ಮಾಡಿಕೊಡುವ ತಿದ್ದುಪಡಿಗೆ ಸರಕಾರ ಮುಂದಾಗಿದೆ.

ಈ ಹಿಂದಿನ ಬಿಜೆಪಿ ಸರಕಾರ ಜಾರಿಗೆ ತಂದಿದ್ದ ಮಧ್ಯ ಪ್ರದೇಶ ಗೋವಂಶ್ ವಧ್ ಪ್ರತಿಶೇಧ್ ಅಧಿನಿಯಮ್ 2005 ಇದಕ್ಕೆ ತಿದ್ದುಪಡಿ ತರಲು ರಾಜ್ಯದ ಕಮಲ್ ನಾಥ್ ಸರಕಾರ ಅನುಮೋದನೆ ನೀಡಿದೆ.

ಗುಂಪೊಂದು ಗೋರಕ್ಷಣೆ ಹೆಸರಿನಲ್ಲಿ ಹಿಂಸೆಯಲ್ಲಿ ತೊಡಗಿದ್ದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯ ಪ್ರಮಾಣ ಕನಿಷ್ಠ ಒಂದು ವರ್ಷದಿಂದ ಗರಿಷ್ಠ ಐದು ವರ್ಷಗಳಾಗಲಿದೆ. ಮತ್ತೆ ಮತ್ತೆ ಅದೇ ತಪ್ಪನ್ನು ಮಾಡಿದವರ ಜೈಲು ಶಿಕ್ಷೆ ಅವಧಿ ದ್ವಿಗುಣಗೊಳ್ಳುವುದು.

ಗೋರಕ್ಷಣೆಯ ಹೆಸರಿನಲ್ಲಿ ನಡೆಯುವ ಗೂಂಡಾಗಿರಿಗೆ ಸಹಾಯ ಮಾಡಿದವರಿಗೂ ಒಂದರಿಂದ ಮೂರು ವರ್ಷಗಳ ತನಕದ ಜೈಲು ಶಿಕ್ಷೆ ಪ್ರಸ್ತಾಪಿಸಲಾಗಿದೆ. ಗೋಹತ್ಯೆ ನಿಷೇಧ ಕಾನೂನಿನನ್ವಯ ಪ್ರಕರಣ ಎದುರಿಸುತ್ತಿರುವವರ ಆಸ್ತಿ ಹಾನಿಗೈದವರಿಗೂ ಶಿಕ್ಷೆ ವಿಧಿಸಲಾಗುವುದು.

ಮೇ 22ರಂದು ಸಿಯೋನಿ ಜಿಲ್ಲೆಯ ದುಂಡಸಿಯೋನಿ ಎಂಬಲ್ಲಿ  ಐದು ಮಂದಿಯ ತಂಡ ಒಬ್ಬ ಮುಸ್ಲಿಂ ಪುರುಷ ಹಾಗೂ ಮಹಿಳೆ ಸೇರಿದಂತೆ ಮೂವರಿಗೆ ಗೋಮಾಂಸ ಸಾಗಿಸುತ್ತಿದ್ದಾರೆಂಬ ಶಂಕೆಯಲ್ಲಿ ಥಳಿಸಿದ ಘಟನೆಯ ನಂತರ ಈ ಬೆಳವಣಿಗೆ ನಡೆದಿದೆ.

ಈ ಹಿಂದೆ ಸರಕಾರ ಗೋ ಸಾಗಣಿಕೆಗೆ ಸಂಬಂಧಿಸಿದ ನಿಯಮಗಳನ್ನು ಸಡಿಲಗೊಳಿಸಿತ್ತು ಹಾಗೂ ರೈತರು ಪರಸ್ಪರ ದನಗಳನ್ನು ಖರೀದಿಸಲು/ಮಾರಾಟ ಮಾಡಲು ಅನುಮತಿಸಲು ನಿರ್ಧರಿಸಿತ್ತಲ್ಲದೆ  ಕೇವಲ ಮಾರುಕಟ್ಟೆಗಳಿಂದ ಮಾತ್ರ ದನಗಳನ್ನು ಖರೀದಿಸಬೇಕೆಂಬ ನಿಯಮವನ್ನು ಕೈಬಿಟ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News