ನಿರ್ಲಕ್ಷ ಚಾಲನೆಯ ಬಸ್ಸುಗಳ ಮುಟ್ಟುಗೋಲು: ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಎಚ್ಚರಿಕೆ

Update: 2019-06-28 10:40 GMT

ಮಂಗಳೂರು, ಜೂ.28: ನಗರ ವ್ಯಾಪ್ತಿಯಲ್ಲಿ ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ಬಸ್ಸುಗಳನ್ನು ನಿಲುಗಡೆ ಮಾಡುವುದು, ನಿರ್ಲಕ್ಷವಾಗಿ ಚಲಾಯಿಸುವ ಪ್ರಕರಣಗಳಿಗೆ ಸಂಬಂಧಿಸಿ ಆ ಬಸ್ಸುಗಳನ್ನು ಮುಟ್ಟುಗೋಲು ಹಾಕಬೇಕು. ಚಾಲಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಂಗಳೂರು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಸಂಚಾರಿ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.

ಇಂದು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದ ವೇಳೆ ಅವರು ಈ ನಿರ್ದೇಶನ ನೀಡಿದರು.

ಸಾರ್ವಜನಿಕರು ದೂರವಾಣಿ ಕರೆಯ ಮೂಲಕ ಮಾತ್ರವಲ್ಲದೆ, ವಾಟ್ಸಾಪ್ ಸಂದೇಶದ ಮೂಲಕವೂ ನಗರದಲ್ಲಿ ಬಸ್ಸುಗಳ ನಿರ್ಲಕ್ಷದ ಚಲಾವಣೆ ಹಾಗೂ ಸಂಚಾರಿ ನಿಯಮಗಳ ಉಲ್ಲಂಘನೆ ಕುರಿತಂತೆ ಸಾಕಷ್ಟು ದೂರುಗಳನ್ನು ನೀಡುತ್ತಿದ್ದಾರೆ. ಬಸ್ಸು ಮಾಲಕರಿಗೆ ಈ ಬಗ್ಗೆ ಚಾಲಕರಿಗೆ ಸೂಚನೆ ನೀಡಲು ಸಾಕಷ್ಟು ಬಾರಿ ತಿಳಿಸಲಾಗಿದೆ. ಇದೀಗ ಕ್ರಮ ಕೈಗೊಳ್ಳುವ ಮೂಲಕ ಎಚ್ಚರಿಕೆ ನೀಡಬೇಕು ಎಂದು ಅವರು ಹೇಳಿದರು.

ಯೆಯ್ಯಡಿಯ ಶರ್ಬತ್‌ಕಟ್ಟೆಯಿಂದ ಪದವು ಹೈಸ್ಕೂಲ್ ಹೋಗುವ ರಸ್ತೆಯಲ್ಲಿ ಕಾಮಗಾರಿಗೆ ಅಗೆದು ಹಾಗೆಯೇ ಬಿಡಲಾಗಿದೆ ಎಂದು ಸಾರ್ವಜನಿಕರೊಬ್ಬರ ದೂರಿಗೆ, ಈ ಬಗ್ಗೆ ಸಂಬಂಧಪಟ್ಟವರಿಗೆ ತಿಳಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಕೂಳೂರು ಹಳೆ ಸೇತವೆಯಲ್ಲಿ ಡಾಮರು ಕಿತ್ತು ಹೋಗಿ ಗುಂಡಿ ನಿರ್ಮಾಣವಾಗಿದೆ. ಇದರಿಂದ ಮಳೆಗಾಲದಲ್ಲಿ ನೀರು ತುಂಬಿ ವಾಹನಗಳ ಓಡಾಟಕ್ಕೆ ಸಮಸ್ಯೆಯಾಗುತ್ತಿದೆ ಎಂದು ಸಾರ್ವಜನಿಕರ ದೂರಿಗೆ ಪ್ರತಿಕ್ರಿಯಿಸಿದ ಸಂದೀಪ್ ಪಾಟೀಲ್, ಈಬಗ್ಗೆ ಎನ್‌ಎಚ್‌ಐ ಮನಕ್ಕೆ ತರುವುದಾಗಿ ತಿಳಿಸಿದರು.

ಲೇಡಿಹಿಲ್, ಉರ್ವಾಸ್ಟೋರ್, ಕಾವೂರು ಮೊದಲಾದ ಕಡೆ ಅನಧಿಕೃತ ಪಾರ್ಕಿಂಗ್ ಸಮಸ್ಯೆಗಳ ಕುರಿತಂತೆಯೇ ಸಾಕಷ್ಟು ದೂರುಗಳು ಇಂದು ಸಾರ್ವಜನಿಕರಿಂದ ವ್ಯಕ್ತವಾಯಿತು.

ಟ್ರಾಫಿಕ್ ಸಮಸ್ಯೆಯೇ ಅಧಿಕ !

ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಬಹುತೇಕವಾಗಿ ಸಂಚಾರಿ ನಿಯಮ ಉಲ್ಲಂಘನೆ, ಬಸ್ ಕೊರತೆ ಮೊದಲಾದ ಸಮಸ್ಯೆಗಳನ್ನು ಮಾತ್ರವೇ ತಿಳಿಸುತ್ತಾರೆ. ಉಳಿದ ಸಮಸ್ಯೆಗಳ ಬಗ್ಗೆ ದೂರುಗಳು ಬರುವುದಿಲ್ಲ. ಟ್ರಾಫಿಕ್ ಅಲ್ಲದೆ, ಇತರ ಹಲವಾರು ಸಮಸ್ಯೆಗಳಿವೆ. ಅದನ್ನು ಯಾರೂ ಯಾಕೆ ಹೇಳಿಕೊಳ್ಳುವುದಿಲ್ಲ ಎಂದು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಆಶ್ಚರ್ಯ ವ್ಯಕ್ತಪಡಿಸಿದರು.

ಗೋ ಕಳ್ಳತನ, ಅಕ್ರಮ ಸಾಗಾಟ ನಿಗಾಕ್ಕೆ ವಿಶೇಷ ತಂಡಗಳ ರಚನೆ

ಗೋ ಕಳ್ಳತನ ಹಾಗೂ ಅಕ್ರಮ ಸಾಗಾಟ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಇವುಗಳ ಮೇಲೆ ಕಟ್ಟುನಿಟ್ಟಿನ ನಿಗಾ ಇರಿಸಲು ವಿಶೇಷ ತಂಡಗಳನ್ನು ರಚಿಸಿದೆ ಎಂದು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಜೋಕಟ್ಟೆ ಪ್ರಕರಣಕ್ಕೆ ಸಂಬಂಧಿಸಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಹೇಳಿದ ಅವರು, ಗೋವು ಕಳ್ಳತನಕ್ಕೆ ಸಂಬಂಧಿಸಿ ಹಳೆ ಆರೋಪಿಗಳ ಬಗ್ಗೆ ನಿಗಾ ಇರಿಸಲಾಗುತ್ತಿದೆ ಎಂದರು.

ಮಾತ್ರವಲ್ಲದೆ, ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಗಸ್ತು ಕೂಡಾ ಬಿಗಿಗೊಳಿಸುವ ಜತೆಗೆ ಹೆಚ್ಚಿಸಲಾಗುತ್ತಿದೆ. ಗೋ ಕಳವು ಅಪರಾಧಿಗಳ ಚಟುವಟಿಕೆಗಳನ್ನು ಪರಿಶೀಲಿಸುವ ನಿಟ್ಟಿನಲ್ಲಿ ಅವರ ಮನೆಗಳ ತಪಾಸಣೆ ಕಾರ್ಯವನ್ನೂ ನಡೆಸಲಾಗುವುದು. ಕೆಲವೊಂದು ನಿರ್ದಿಷ್ಟ ಪ್ರದೇಶಗಳಿಗೆ ಸೇರಿದವರಾಗಿರುವ ಗೋವು ಕಳ್ಳತನ ಅಪರಾಧಿಗಳ ಮೇಲೂ ನಿಗಾ ಇರಿಸಲಾಗಿದೆ. ಮಂಗಳೂರು ನಗರವಲ್ಲದೆ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗೆ ಸಂಬಂಧಿಸಿದ ಇಂತಹ ಅಪರಾಧಿಗಳ ಬಗ್ಗೆಯೂ ಸಂಬಂಧಪಟ್ಟ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆಯಲಾಗಿದೆ. ಕುಟ್ಟ ಇಮ್ರಾನ್, ಬಶೀರ್, ಅನ್ಸಾರ್ ಮೊದಲಾದ ತಲೆಮರೆಸಿಕೊಂಡಿರುವ ಗೋ ಕಳವು ಅಪರಾಧಿಗಳನ್ನು ಬಂಧಿಸಲು ವಿಶೇಷ ತಂಡದ ಮೂಲಕ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಕಾನೂನು ಕೈಗೆತ್ತಿಕೊಳ್ಳದಿರಿ

ಅಕ್ರಮ ಗೋ ಸಾಗಾಟ, ಗೋ ಕಳ್ಳತನಕ್ಕೆ ಸಂಬಂಧಿಸಿ ಮಾಹಿತಿ ದೊರಕಿದ್ದಲ್ಲಿ ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಸಾರ್ವಜನಿಕರಿಗೆ ಮನವಿ ಮಾಡಿದ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಮಾಹಿತಿ ನೀಡಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ರಾತ್ರಿ ಗಸ್ತು ಕಾರ್ಯಾಚರಣೆ ಜತೆಗೆ ನಾಕಾಬಂದಿ ಮಾಡಿ ಕ್ರವು ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭ ಡಿಸಿಪಿಗಳಾದ ಲಕ್ಷ್ಮಿ ಗಣೇಶ್, ಹನುಮಂತರಾಯ, ಎಸಿಪಿ ಮಂಜುನಾಥ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News