ದೊರೆಯದ ಆ್ಯಂಬುಲೆನ್ಸ್: ಪ್ರಜ್ಞಾಹೀನ ಗರ್ಭಿಣಿಯನ್ನು ಬೈಕ್ ನಲ್ಲಿ ಆಸ್ಪತ್ರೆಗೆ ಸಾಗಿಸಿದರು!

Update: 2019-06-28 09:53 GMT

ರಾಂಚಿ, ಜೂ.28: ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ, ಪ್ರಜ್ಞಾಹೀನರಾಗಿದ್ದ ಮಹಿಳೆಯನ್ನು ಆ್ಯಂಬುಲೆನ್ಸ್ ದೊರೆಯದ ಕಾರಣ ಬೈಕ್ ನಲ್ಲಿ ಆಸ್ಪತ್ರೆಗೆ ಕರೆದೊಯ್ದ ಘಟನೆ ಜಾರ್ಖಂಡ್ ನ ಲಾತೆಹಾರ್ ಜಿಲ್ಲೆಯ ಚಟೌಗ್ ಎಂಬ ಗ್ರಾಮದಲ್ಲಿ ನಡೆದಿದೆ.

ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ 30 ವರ್ಷದ ಮಹಿಳೆ ಶಾಂತಿದೇವಿಯನ್ನು ಮನೆಯಿಂದ 10 ಕಿ.ಮೀ. ದೂರದ ಆರೋಗ್ಯ ಕೇಂದ್ರಕ್ಕೆ ಬೈಕಿನಲ್ಲಿಯೇ ಸಾಗಿಸಲಾಗಿತ್ತು. ಆದರೆ ಅಲ್ಲಿನ ಆರೋಗ್ಯಾಧಿಕಾರಿ ಆಕೆಯನ್ನು ಲಾತೆಹಾರ್ ಸದರ್ ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿದ ನಂತರ ಅಲ್ಲಿ ಆ್ಯಂಬುಲೆನ್ಸ್ ದೊರೆತು 27 ಕಿ.ಮೀ. ದೂರದ ಆ ಇನ್ನೊಂದು ಆಸ್ಪತ್ರೆ ತಲುಪಿದರೂ ವೈದ್ಯರು  ಆಕೆಯನ್ನು ರಾಂಚಿಯ ರಾಜೇಂದ್ರ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸಸ್ ಗೆ ಸೇರಿಸುವಂತೆ ಹೇಳಿದರು. ಅಂತೂ ಆಕೆಯನ್ನು ಅಲ್ಲಿಗೆ ಸಾಗಿಸಿ ಆಸ್ಪತ್ರೆಗೆ ದಾಖಲಿಸಲಾಯಿತು.

ಗಂಭೀರ ಸ್ಥಿತಿಯಲ್ಲಿದ್ದ ಗರ್ಭಿಣಿಯೊಬ್ಬರಿಗೆ ವೈದ್ಯರು ಚಿಕಿತ್ಸೆ ನೀಡದೆ ಬೇರೆ ಆಸ್ಪತ್ರೆಗಳಿಗೆ ಸಾಗಿಸುವಂತೆ ಶಿಫಾರಸು ಮಾಡಿರುವುದನ್ನು ಹಲವು ಸಾಮಾಜಿಕ ಕಾರ್ಯಕರ್ತರು ಟೀಕಿಸಿದ್ದಾರೆ.

“ಆಕೆಯನ್ನು ಆ್ಯಂಬುಲೆನ್ಸ್ ನಲ್ಲಿ ಸಾಗಿಸಲು ನಿರ್ಧರಿಸಿದರೂ ಚಂದ್ರಾ ಸಮುದಾಯ ಆರೋಗ್ಯ ಕೇಂದ್ರ ಅಂಬುಲೆನ್ಸ್ ಒದಗಿಸಿರಲಿಲ್ಲ. ನಂತರ 108 ಸಹಾಯವಾಣಿಗೆ ಕರೆ ಮಾಡಿದರೂ ಪ್ರಯೋಜನವಾಗಿಲ್ಲ. ಆಕೆಯ ಸ್ಥಿತಿ ಗಂಭೀರವಾಗಿದ್ದರಿಂದ ಉಪಾಯವಿಲ್ಲದೆ ಬೈಕ್‍ನಲ್ಲಿ ಕರೆದುಕೊಂಡು ಹೋದೆವು” ಎಂದು ಆಕೆಯ ಪತಿ ಕಮಲ್ ಗಂಝು ಮಾಹಿತಿ ನೀಡಿದ್ದಾರೆ.

ಸ್ಥಳೀಯ ಸಂಸದ ಮಾದರಿ ಗ್ರಾಮವಾಗಿ ಅಭಿವೃದ್ಧಿ ಪಡಿಸಲು ಆರಿಸಿದ ಮೂರು ಗ್ರಾಮಗಳಲ್ಲಿ ಚಟೌಗ್ ಕೂಡ ಒಂದೆಂದು ತಿಳಿದು ಬಂದಿದೆ.

“ನಮ್ಮಲ್ಲಿ ಒಂದು ಆ್ಯಂಬುಲೆನ್ಸ್ ಸಮುದಾಯ ಆರೋಗ್ಯ ಕೇಂದ್ರದ ಬಳಿಯಿದ್ದರೆ, ಇನ್ನೊಂದು 108 ಆ್ಯಂಬುಲೆನ್ಸ್  ಇದೆ. ಗರ್ಭಿಣಿ ಮಹಿಳೆಯರಿಗೆ ಮಮತಾ ವಾಹನ ಕೂಡ ಇದೆ. ಹೀಗಿರುವಾಗ ಆಕೆಗೆ ಆ್ಯಂಬುಲೆನ್ಸ್ ಒದಗಿಸದೇ ಇರುವುದು ಸ್ವೀಕಾರಾರ್ಹವಲ್ಲ,'' ಎಂದಿರುವ ಲಾತೆಹಾರ್ ಸಿವಿಲ್ ಸರ್ಜನ್ ಡಾ. ಎಸ್ ಪಿ ಶರ್ಮ ಘಟನೆಯ ತನಿಖೆಗೆ ಆದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News