ಪೆರ್ಮನ್ನೂರು- ಚೆಂಬುಗುಡ್ಡೆಯಲ್ಲಿ ವಿಶೇಷ ಆಂದೋಲನ: ತಹಶೀಲ್ದಾರ್
ಮಂಗಳೂರು, ಜೂ.28: ಡಿಸಿ ಮನ್ನಾ ಜಾಗ ಅರ್ಹ ದಲಿತ ಫಲಾನುಭವಿಗಳಿಗೆ ದೊರಕುವ ನಿಟ್ಟಿನಲ್ಲಿ ಮಂಗಳೂರು ತಾಲೂಕಿನ ಪೆರ್ಮನ್ನೂರು ಚೆಂಬುಗುಡ್ಡೆಯಲ್ಲಿ ಪ್ರಥಮ ಹಂತವಾಗಿ ವಿಶೇಷ ಆಂದೋಲನ ನಡೆಸಲಾಗುವುದು ಎಂದು ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್ ತಿಳಿಸಿದ್ದಾರೆ.
ಮಂಗಳೂರು ತಾಲೂಕು ಮಟ್ಟದ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ದೌರ್ಜನ್ಯ, ಕುಂದುಕೊರತೆಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅರ್ಹ ದಲಿತರಿಗೆ ಮಂಜೂರಾದ ಡಿಸಿ ಮನ್ನಾ ಜಾಗದಲ್ಲಿ ಇತರರು ಅಕ್ರಮವಾಗಿ ಮನೆ ಕಟ್ಟಿ ನೆಲೆಸಿರುವುದು, ಫಲಾನುಭವಿಗಳು ಅದನ್ನು ಇತರರಿಗೆ ಬಾಡಿಗೆ ನೀಡಿರುವುದು ಮೊದಲಾದ ಪ್ರಕರಣಗಳಿಗೆ ಸಂಬಂಧಿಸಿ ದೂರುಗಳು ಬಂದಿವೆ. ಹಾಗಾಗಿ ಪ್ರಥಮವಾಗಿ ಈ ಪ್ರದೇಶದಲ್ಲಿ ಅರ್ಹ ಫಲಾನುಭವಿಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಈ ಆಂದೋಲನವನ್ನು ನಡೆಸಲಾಗುವುದು. ಬಳಿಕ ತಾಲೂಕಿನ ಇತರ ಕಡೆಗಳಲ್ಲೂ ಮುಂದುವರಿಸಲಾಗುವುದು ಎಂದು ಹೇಳಿದರು.
ತಾಲೂಕಿನ 41 ಗ್ರಾಮಗಳಲ್ಲಿ ನಿವೇಶನಕ್ಕೆ ಸಂಬಂಧಿಸಿ ದಲಿತರಿಂದ 3000ಕ್ಕೂ ಅಧಿಕ ಅರ್ಜಿಗಳು ಸ್ವೀಕೃತವಾಗಿವೆ. ನಗರದಲ್ಲಿ ಜಾಗದ ಕೊರತೆ ಇರುವುದರಿಂದ ಕಣ್ಣೂರು ಗ್ರಾಮದಲ್ಲಿ ಸಮಾರು 3 ಎಕರೆ ಸರಕಾರಿ ಜಾಗವನ್ನು ಡಿಸಿ ಮನ್ನಾ ಜಾಗ ಎಂದು ಪರಿಗಣಿಸಿ ನಿವೇಶನ ಹಂಚುವ ಪ್ರಕ್ರಿಯೆ ನಡೆಸಲಾಗುತ್ತಿದೆ. ಈಗಾಗಲೇ 10.93 ಎಕರೆ ಡಿಸಿ ಮನ್ನಾ ಜಾಗವನ್ನು ಸ್ವಯಂ ಪ್ರೇರಿತವಾಗಿ ಗ್ರಾಮ ಪಂಚಾಯತ್‌ಗೆ ಹಸ್ತಾಂತರಿಸಲಾಗಿದೆ ಎಂದು ಅವರು ಸಭೆಯಲ್ಲಿ ತಿಳಿಸಿದರು.
ಅಂಬೇಡ್ಕರ್ ಭವನ ಶೀಘ್ರವೇ ಉದ್ಘಾಟನೆ
ಉರ್ವಸ್ಟೋರ್‌ನ ಅಂಗಡಿಗುಡ್ಡೆಯಲ್ಲಿ ನಿರ್ಮಾಣವಾಗಿರುವ ದ.ಕ. ಜಿಲ್ಲಾ ಮಟ್ಟದ ಅಂಬೇಡ್ಕರ್ ಭವನ ಉದ್ಘಾಟನೆಗೆ ಈಗಾಗಲೇ ಆಗಸ್ಟ್ 15ರಂದು ದಿನ ನಿಗದಿಪಡಿಸಲಾಗಿದೆ ಎಂದು ತಹಶೀಲ್ದಾರಣ ಗುರುಪ್ರಸಾದ್ ಸಭೆಯಲ್ಲಿ ತಿಳಿಸಿದರು.
ಈ ಸಂದರ್ಭ ದಲಿತ ನಾಯಕರಾದ ದೇವದಾಸ್, ಚಂದಪ್ಪ, ಆನಂದ್, ರಘು ಮೊದಲಾದವರು, ಸ್ವಾತಂತ್ರ ದಿನಾಚರಣೆಯಂದು ಉದ್ಘಾಟನಾ ಸಮಾರಂಭ ಇರಿಸಿದರೆ, ಶಾಲಾ ಕಾಲೇಜು ಮಕ್ಕಳಿಗೆ ಆಗಮಿಸಲು ತೊಂದರೆಯಾಗುತ್ತದೆ. ದಿನಾಂಕವನ್ನು ಮುಂಚಿತವಾಗಿ ಅಥವಾ ಸ್ವಾತಂತ್ರ ದಿನಾಚರಣೆಯ ಬಳಿಕ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು ಎಂದು ತಹಶೀಲ್ದಾರ್ ತಿಳಿಸಿದರು.
ಭವನದ ನಿರ್ವಹಣಾ ಸಮಿತಿಯಲ್ಲಿ ನೋಂದಾಯಿತ ಸಂಘಟನೆಗಳ ನಾಯಕರಿಗೆ ಆದ್ಯತೆ
ಅಂಬೇಡ್ಕರ್ ಭವನದ ಸಮರ್ಪಕ ನಿರ್ವಹಣೆಯ ಸಲುವಾಗಿ ಜಿಲ್ಲಾಧಿಕಾರಿ, ಸಮಾಜ ಕಲ್ಯಾಣ ಅಧಿಕಾರಿಯವರನ್ನು ಒಳಗೊಂಡ ನಿರ್ವಹಣಾ ಸಮಿತಿಯನ್ನು ರಚಿಸಲಾಗುವುದು. ಆ ಸಂದರ್ಭ ದಲಿತ ನಾಯಕರನ್ನೂ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲು ತೀರ್ಮಾನಿಸಲಾಗಿದೆ ಎಂದು ತಹಶೀಲ್ದಾರ್ ತಿಳಿಸಿದರು.
ಇದಕ್ಕೆ ದಲಿತ ನಾಯಕರು ಪ್ರತಿಕ್ರಿಯಿಸಿ, ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಹಲವು ದಲಿತ ಸಂಘಟನೆಗಳು ಹೋರಾಟ ನಡೆಸಿವೆ. ಹಾಗಾಗಿ ನೋಂದಾಯಿತ ಸಂಘಟನೆಗಳ ಮುಖಂಡರನ್ನು ಸಮಿತಿಗೆ ಪರಿಗಣಿಬೇಕು ಎಂದು ಮನವಿ ಮಾಡಿದರು.
ಹಕ್ಕು ಪತ್ರ ಸಿದ್ಧವಾಗಿದ್ದರೂ ಯಾಕೆ ನೀಡುತ್ತಿಲ್ಲ ?
ಮುಲ್ಕಿ ತಾಲೂಕಿನಲ್ಲಿ ದಲಿತರಿಗೆ ಸಂಬಂಧಿಸಿದ ಭೂಮಿಯಲ್ಲಿ 94ಸಿಸಿಯಡಿ ಲೋಕಸಭಾ ಚುನಾವಣೆಗೆ ಮುಂಚಿತವಾಗಿಯೇ ಹಕ್ಕುಪತ್ರ ಸಿದ್ಧ ವಾಗಿದೆ. ಚುನಾವಣೆ ಮುಗಿದು ಎರಡು ತಿಂಗಳಾದರೂ ವಿಶೇಷ ತಹಶೀಲ್ದಾರ್ ಇನ್ನೂ ಯಾಕೆ ವಿತರಿಸಿಲ್ಲ ಎಂದು ದಲಿತ ನಾಯಕ ಜಗದೀಶ್ ಆಕ್ಷೇಪಿಸಿದರು.
ಇಲ್ಲಿ ಸಣ್ಣಪುಟ್ಟ ಗಡಿಗುರುತಿನ ಸಮಸ್ಯೆ ಇದೆ. ಅದಕ್ಕಾಗಿ ಮುಖಂಡರ ಸಮಕ್ಷಮದಲ್ಲಿ ಅದನ್ನು ಇತ್ಯರ್ಥಗೊಳಿಸಿ ಹಕ್ಕುಪತ್ರ ವಿತರಿಸಲಾಗುವುದು ಎಂದು ತಹಶೀಲ್ದಾರ್ ಭರವಸೆ ನೀಡಿದರು.
ಸಹಕಾರಿ ಸಂಘಗಳಲ್ಲಿ ಪರಿಶಿಷ್ಟ ಜಾತಿ, ಪಂಗಡಗಳಿಗೆ ಆದ್ಯತೆ ನೀಡುತ್ತಿಲ್ಲ. ಕಾನೂನು ಪ್ರಕಾರವಾಗಿ ಇಂತಿಷ್ಟು ಹುದ್ದೆಗಳು, ಇಂತಿಷ್ಟು ಸದಸ್ಯರು ಇರಬೇಕೆಂಬ ನಿಯಮವಿದ್ದರೂ ಪಾಲಿಸಲಾಗುತ್ತಿಲ್ಲ. ಜಾತಿ ತಾರತಮ್ಯ, ಅಸ್ಪಶ್ಯತೆ ಇನ್ನೂ ಕಡಿಮೆ ಆಗಿಲ್ಲ ಎಂದು ದಲಿತ ನಾಯಕ ದೇವದಾಸ್ ಸಭೆಯಲ್ಲಿ ಅಸವಾಧಾನ ವ್ಯಕ್ತಪಡಿಸಿದರು.
ಅಂಬೇಡ್ಕರ್ ವೃತ್ತದಲ್ಲಿ ಬ್ಯಾಂಕ್ ನಾಮಫಲಕ: ವಾರದೊಳಗೆ ತೆಗೆಯದಿದ್ದರೆ ನಾವೇ ತೆಗೆಯುತ್ತೇವೆ
ನಗರದ ಅಂಬೇಡ್ಕರ್ ವೃತ್ತದ ಬಗ್ಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿದೆ. ಆ ವೃತ್ತಕ್ಕೆ ಅಂಬೇಡ್ಕರ್ ವೃತ್ತ ಎಂಬುದಾಗಿ ಹೆಸರು ಹಾಕಲು ಇನ್ನೂ ಮಹಾನಗರ ಪಾಲಿಕೆ ಮುಂದಾಗಿಲ್ಲ. ಅಲ್ಲಿ ಬ್ಯಾಂಕ್‌ನ ನಾಮಫಲಕವನ್ನು ದೊಡ್ಡದಾಗಿ ಹಾಕುವ ಮೂಲಕ ಅಂಬೇಡ್ಕರ್ ಹೆಸರಿಗೆ ಅವಮಾನ ಮಾಡಲಾಗುತ್ತಿದೆ. ಒಂದು ವಾರದೊಳಗೆ ಆ ನಾಮಫಲಕವನ್ನು ತೆರವುಗೊಳಿಸಿ ಅಂಬೇಡ್ಕರ್ ನಾಮಫಲಕವನ್ನು ಹಾಕಬೇಕು. ಇಲ್ಲವಾದಲ್ಲಿ ನಾವೇ ತೆಗೆಯುತ್ತೇವೆ ಎಂದು ಸಭೆಯಲ್ಲಿ ಉಪಸ್ಥಿತರಿದ್ದ ದಲಿತ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.
ಎಸ್‌ಸಿಎಸ್‌ಟಿ ಕೋಟಾ ದುರ್ಬಳಕೆ: ತನಿಖೆಗೆ ಆದೇಶ
ಮಂಗಳೂರು ಮಹಾ ನಗರ ಪಾಲಿಕೆಯಲ್ಲಿ ಎಸ್‌ಸಿ/ಎಸ್‌ಟಿ ಕೋಟಾದಡಿ ಮಂಜೂರಾದ ಗುತ್ತಿಗೆಯನ್ನು ಇತರರು ನಿರ್ವಹಿಸುವ ಪ್ರಕರಣಗಳಿವೆ. ಮಾರುಕಟ್ಟೆಯಲ್ಲಿ ದಲಿತರಿಗೆ ಮೀಸಲಾದ ಅಂಗಡಿಗಳನ್ನು ಇತರರು ನಿರ್ವಹಿಸುತ್ತಾರೆ ಎಂದು ಸಭೆಯಲ್ಲಿ ಅಶೋಕ್ ಕೊಂಚಾಡಿಯವರು ದಾಖಲೆ ಪತ್ರಗಳೊಂದಿಗೆ ಆರೋಪ ಮಾಡಿದರು.
ಮನಪಾ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ. ದಲಿತರ ವಿಚಾರದಲ್ಲಿ ಮನಪಾ ನಿರ್ಲಕ್ಷ ವಹಿಸುತ್ತಿದೆ ಎಂದು ಆರೋಪಿಸಿದ ಅವರು, ಈ ರೀತಿಯ ದುರುಪಯೋಗವನ್ನು ತಪ್ಪಿಸಿ ಸಮುದಾಯದ ಅರ್ಹರಿಗೆ ಸೌಲಭ್ಯವನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ಈ ಬಗ್ಗೆ ತನಿಖೆಗೆ ಆದೇಶಿಸುವಂತೆ ತಹಶೀಲ್ದಾರ್ ಸಭೆಯಲ್ಲಿದ್ದ ಮನಪಾ ಅಧಿಕಾರಿಗಳಿಗೆ ಸೂಚಿಸಿದರು.