ಸುರತ್ಕಲ್ ಫ್ಯಾಕ್ಟರಿಗೆ ನುಗ್ಗಿ ಮ್ಯಾನೇಜರ್‌ಗೆ ಕೊಲೆ ಬೆದರಿಕೆ: ಪ್ರಕರಣ ದಾಖಲು
ಮಂಗಳೂರು, ಜೂ.28: ಸುರತ್ಕಲ್ ಸಮೀಪದ ಇಡ್ಯಾ ಗ್ರಾಮದ ಫ್ಯಾಕ್ಟರಿಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳ ಗುಂಪೊಂದು, ಫ್ಯಾಕ್ಟರಿಯಲ್ಲಿನ ಸೊತ್ತು ಸಹಿತ ನಗದು ಕಳವುಗೈದ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಡ್ಯಾ ಗ್ರಾಮದ ಪ್ರೇಮ್‌ಸಾಗರ್-ಬಾಟ್ಲಿಂಗ್ ಆ್ಯಂಡ್ ಬೇವರೇಜಸ್ ಫ್ಯಾಕ್ಟರಿಯ ಮ್ಯಾನೇಜರ್ ಮ್ಯಾಕ್ಸಿಂ ಜೋಸೆಫ್ ನೊರೊನ್ಹ ಅವರಿಗೆ ಕೊಲೆ ಬೆದರಿಕೆ ಹಾಕಲಾಗಿದೆ. ಅನಿಲ್ ಹೆಗ್ಡೆ, ಅನ್ಸಿಲ್, ಮುಜೀಬ್, ನಾರಾಯಣ, ಉದಯ ಸಹಿತ ಒಂಬತ್ತು ಮಂದಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ವಿವರ: ಫ್ಯಾಕ್ಟರಿಯ ಮಾಲಕ ಡ್ಯಾನಿ ಆಂತೋನಿ ಪೌಲ್ ಜೂ.22ರಂದು ವ್ಯವಹಾರ ನಿಮಿತ್ತ ದುಬೈಗೆ ತೆರಳಿದ್ದರು. ಈ ಮಧ್ಯೆ ಜೂ. 25ರಂದು ಬೆಳಗ್ಗೆ 8 ಗಂಟೆ ಸುಮಾರು ಫ್ಯಾಕ್ಟರಿಗೆ ಅಕ್ರಮ ಪ್ರವೇಶಿಸಿದ ಆರೋಪಿಗಳು, ಮ್ಯಾನೇಜರ್‌ಗೆ ಕೊಲೆ ಬೆದರಿಕೆ ಹಾಕಿ, ಫ್ಯಾಕ್ಟರಿಯ ಮಾಲಕರ ಕ್ಯಾಬೀನ್ ಫೈಬರ್ ಶೀಟ್‌ನ್ನು ಒಡೆದು ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕ್ಯಾಬೀನ್‌ನಲ್ಲಿದ್ದ ಸಿಸಿಟಿವಿ, ಡಿವಿಆರ್, ಹಾರ್ಡ್ ಡಿಸ್ಕ್, ಮೂರು ಚಿನ್ನದ ಉಂಗುರ, 1.21 ಲಕ್ಷ ರೂ. ನಗದು, ಚೆಕ್‌ಪುಸ್ತಕ, ಮೊಬೈಲ್, ಜಿಎಸ್‌ಟಿ ಪೈಲ್ಸ್, ಮೂರು ಯುಎಸ್‌ಬಿ ಟೆಕ್ನಿಕಲ್ ಸ್ಪೆಸಿಫಿಕೇಶನ್ ಪೈಲ್ಸ್ ಹಾಗೂ ಗ್ರಾಹಕರು ನೀಡಿದ ಪೋಸ್ಟ್ ಪೇಮೆಂಟ್ ಚೆಕ್‌ಗಳನ್ನು ಕಳವುಗೈಯಲಾಗಿದೆ. ಜತೆಗೆ, ಫ್ಯಾಕ್ಟರಿಯ ಮುಂಭಾಗದ ಬೋರ್ಡ್‌ಗೆ ಬಣ್ಣ ಬಳಿದು ಕೃತ್ಯ ಎಸಗಲಾಗಿದೆ ಎಂದು ಡ್ಯಾನಿ ಆಂತೋನಿ ಪೌಲ್ ದೂರಿನಲ್ಲಿ ತಿಳಿಸಿದ್ದಾರೆ.
ಮತ್ತೊಂದು ಪ್ರಕರಣ
ಕೊಲೆ ಬೆದರಿಕೆ ಆರೋಪ ಪ್ರಕರಣದ ಪ್ರಧಾನ ಆರೋಪಿ ಅನಿಲ್ ಹೆಗ್ಡೆ ವಿರುದ್ಧ ಸುರತ್ಕಲ್ ಠಾಣೆಯಲ್ಲಿ 2019ರ ಎಪ್ರಿಲ್ 28ರಂದು ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ವಂಚನೆ ಪ್ರಕರಣ ದಾಖಲಾಗಿದೆ.
ಆಸ್ತಿ ವಿವಾದ: ಸುರತ್ಕಲ್ ಸಮೀಪದ ಫ್ಯಾಕ್ಟರಿಯ ಮಾಲಕ ಹಾಗೂ ಪ್ರಕರಣದ ಆರೋಪಿಗೆ ಈ ಮೊದಲೇ ಆಸ್ತಿ ವಿವಾದಕ್ಕೆ ಸಂಬಂಧಿಸಿದ ವ್ಯಾಜ್ಯವಿದೆ. ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವ್ಯಾಜ್ಯದ ವಿಚಾರಣೆ ನಡೆಯುತ್ತಿದೆ. ಆರೋಪಿಯು ತನಗೆ ಸೇರಿದ ಸೊತ್ತುಗಳನ್ನು ತೆಗೆದುಕೊಂಡು ಹೋಗಿದ್ದಾನೆ ಎನ್ನುವ ಮಾಹಿತಿ ಇದೆ. ಆರೋಪಿ ವಿರುದ್ಧ ಕಳವು ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 506 (ಕೊಲೆ ಬೆದರಿಕೆ), 448 (ಅಕ್ರಮ ಪ್ರವೇಶ), 427 (ಆಸ್ತಿಹಾನಿ), 380 (ಕಳವು), 341 (ಕಾನೂನು ಕೈಗೆ ತೆಗೆದುಕೊಂಡ ಬಗ್ಗೆ), 149 (ಕಾನೂನುಬಾಹಿರ ಗುಂಪು ಕೂಡುವಿಕೆ) ಪ್ರಕಾರ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.