ವಿಧಾನಸಭೆ ಆವರಣಕ್ಕೆ ಪ್ರವೇಶ ಮೊಟಕು: ಪತ್ರಕರ್ತರಿಂದ ಪ್ರತಿಭಟನೆ

Update: 2019-06-28 15:08 GMT

ಜೈಪುರ, ಜೂ.28: ರಾಜ್ಯ ವಿಧಾನಸಭೆ ಆವರಣದಲ್ಲಿ ಪತ್ರಕರ್ತರ ಚಲನವಲನವನ್ನು ಮೊಟಕುಗೊಳಿಸುವ ನೂತನ ನಿಯಮದ ವಿರುದ್ಧ ರಾಜಸ್ಥಾನದ ಜೈಪುರದಲ್ಲಿ ಪತ್ರಕರ್ತರು ಗುರುವಾರ ಪ್ರತಿಭಟನೆ ನಡೆಸಿದರು. ಪ್ರೆಸ್ ಕ್ಲಬ್ ಸದಸ್ಯರು ಶುಕ್ರವಾರವೂ ಸದನದ ಪ್ರಕ್ರಿಯೆಗಳನ್ನು ಬಹಷ್ಕರಿಸುವ ಮೂಲಕ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದರು.

 ನೂತನ ನಿಯಮದ ಪ್ರಕಾರ, ವಿಧಾನಸಭೆಯ ಒಳಗೆ ಪತ್ರಕರ್ತರ ಪ್ರವೇಶವನ್ನು ಪ್ರೆಸ್ ಗ್ಯಾಲರಿಗೆ ಮತ್ತು ಮಾಧ್ಯಮ ಕೋಣೆಗೆ ಸೀಮಿತಗೊಳಿಸಲಾಗಿದೆ. ಹಾಗಾಗಿ, ಸ್ಪೀಕರ್ ಮತ್ತು ಸಚಿವರ ಕಚೇರಿಗಳು ಸೇರಿದಂತೆ ವಿಧಾನಸಭೆಯ ಆವರಣದಲ್ಲಿರುವ ಇತರ ಸ್ಥಳಗಳಿಗೆ ಪತ್ರಕರ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಸದನದ ಕಲಾಪಗಳ ದಾಖಲೆಗಳು ಅಥವಾ ಸದನದಲ್ಲಿ ಸದಸ್ಯರು ಮಾಡುವ ಭಾಷಣದ ಪ್ರತಿಗಳನ್ನು ಪಡೆಯುವ ವಿಧಾನಸಭೆಯ ವಿಭಾಗಕ್ಕೂ ಪತ್ರಕರ್ತರಿಗೆ ಪ್ರವೇಶವನ್ನು ನಿರಾಕರಿಸಲಾಗಿದೆ. ಭದ್ರತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಈ ಹಿಂದೆ ಪತ್ರಕರ್ತರು ವಿಧಾನಸಭೆಯ ಉದ್ದಗಲಕ್ಕೂ ಚಲಿಸಬಹುದಿತ್ತು. ಸ್ಪೀಕರ್ ಕಚೇರಿ, ಮುಖ್ಯಮಂತ್ರಿಗಳು, ಸಚಿವರು ಮತ್ತು ಶಾಸಕರ ಕಚೇರಿಗಳಿಗೆ ಪ್ರವೇಶಿಸಲು ಅವರಿಗೆ ಯಾವುದೇ ನಿರ್ಬಂಧವಿರಲಿಲ್ಲ ಎಂದು ಪಿಟಿಐ ವರದಿ ಮಾಡಿದೆ. ನೂತನ ನಿಯಮ ನಮ್ಮ ಹಕ್ಕುಗಳ ಮೇಲೆ ಮಾಡಿದ ದಾಳಿಯಾಗಿದೆ. ಹಿಂದಿನ ಸರಕಾರವೂ ಪತ್ರಕರ್ತರನ್ನು ಕೆಣಕಲು ನಿಯಮವನ್ನು ಜಾರಿ ಮಾಡಿತ್ತು. ಆದರೆ ಅದರ ವಿರುದ್ಧ ನಾವು ಪ್ರತಿಭಟನೆ ನಡೆಸಿದ ನಂತರ ಸರಕಾರ ಈ ನಿರ್ಧಾರವನ್ನು ಕೈಬಿಟ್ಟಿತ್ತು ಎಂದು ಪಿಂಕ್ ಸಿಟಿ ಪ್ರೆಸ್ ಕ್ಲಬ್‌ನ ಮಾಜಿ ಅಧ್ಯಕ್ಷ ವೀರೇಂದ್ರ ಸಿಂಗ್ ರಾಥೋಡ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News