×
Ad

ರಾ. ಹೆದ್ದಾರಿಯಲ್ಲಿನ ಅನಧಿಕೃತ ಬಸ್ ನಿಲ್ದಾಣಗಳ ಪರಿಶೀಲನೆ: ಎಸ್ಪಿ

Update: 2019-06-28 20:51 IST

ಉಡುಪಿ, ಜೂ.28: ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಅನಧಿಕೃತ ಬಸ್ ನಿಲ್ದಾಣಗಳ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಡಿವೈಎಸ್ಪಿಗಳಿಗೆ ಸೂಚಿಸಲಾಗಿದ್ದು, ಈ ಕುರಿತು ಅಗತ್ಯ ಕ್ರಮಕ್ಕಾಗಿ ವರದಿಯನ್ನು ಉಡುಪಿ ಜಿಲ್ಲಾಧಿಕಾರಿ ಹಾಗೂ ಆರ್‌ಟಿಓ ಅವರಿಗೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ತಿಳಿಸಿದ್ದಾರೆ.

ಉಡುಪಿ ಎಸ್ಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಕ್ರೆಡೈ ಉಡುಪಿ ಜಿಲ್ಲೆ ಇದರ ಸಿಎಸ್‌ಆರ್ ಯೋಜನೆಯಡಿ ಸಂಚಾರ ಪೊಲೀಸ್ ಸಿಬ್ಬಂದಿಗಳಿಗೆ 40 ರೈನ್ ಕೋಟ್‌ಗಳ ಹಸ್ತಾಂತರ ಕಾರ್ಯಕ್ರವುದಲ್ಲಿ ಅವರು ಮಾತನಾಡುತಿದ್ದರು.

ಅನಧಿಕೃತ ಬಸ್‌ನಿಲ್ದಾಣದಿಂದಾಗಿ ಅಪಘಾತ ಪ್ರಕರಣಗಳು ಹೆಚ್ಚುತ್ತಿದ್ದು, ಈ ಬಗ್ಗೆ ಪ್ರಥಮ ಹಂತವಾಗಿ ಉಡುಪಿ ಹಾಗೂ ಕುಂದಾಪುರದಲ್ಲಿ ಪರಿಶೀಲನೆ ನಡೆಸಲಾಗುವುದು. ಸಂತೆಕಟ್ಟೆಯ ಜಂಕ್ಷನ್‌ನಲ್ಲಿರುವ ಬಸ್‌ನಿಲ್ದಾಣ ಮತ್ತು ರವಿವಾರದ ಸಂತೆಯಿಂದ ಬಹಳಷ್ಟು ಸಮಸ್ಯೆಗಳು ಉಂಟಾಗುತ್ತಿರುವುದು ಗಮನಕ್ಕೆ ಬಂದಿದ್ದು, ಈ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಸಾಮರ್ಥ್ಯಕ್ಕಿಂತ ಹೆಚ್ಚಿನ ಮಕ್ಕಳನ್ನು ಸಾಗಿಸುವ ಶಾಲಾ ವಾಹನಗಳ ವಿರುದ್ಧ ಕ್ರಮ ಜರಗಿಸಲಾಗುತ್ತಿದ್ದು, ರಸ್ತೆ ಸುರಕ್ಷತೆ ಬಗ್ಗೆ ಜನರಿಗೆ ಜಾಗೃತಿ ನೀಡುವ ಕಾರ್ಯ ಮಾಡಲಾಗುತ್ತಿದೆ. ಸರ್ವೀಸ್ ರಸ್ತೆಗಳಲ್ಲಿ ಹಂಪ್ಸ್ ಅಳವಡಿಕೆ ಹಾಗೂ ಹೆದ್ದಾರಿಯಲ್ಲೇ ಬಸ್ ನಿಲ್ಲಿಸುವವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಕ್ರೆಡೈ ಅಧ್ಯಕ್ಷ ಜೆರ್ರಿ ವಿನ್ಸೆಂಟ್ ಡಯಾಸ್ ರೈನ್‌ಕೋಟ್‌ಗಳನ್ನು ಹಸ್ತಾಂತರಿಸಿದರು. ಈ ಸಂದರ್ಭ ಕ್ರೆಡೈ ಕಾರ್ಯದರ್ಶಿ ಜೋಯನ್ ಲೇವಿಸ್, ಸದಸ್ಯರಾದ ಪ್ರವೀಣ್, ಶಿವಪ್ರಸಾದ್, ರಂಜನ್, ಹರೀಶ್ ಕಿಣಿ, ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್, ನಗರ ಸಂಚಾರ ಠಾಣೆಯ ಉಪನಿರೀಕ್ಷಕ ನಾರಾಯಣ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News