ಮಂಗಳೂರಿನ ಹೊಟೇಲ್ ಬಂದ್ ಮಾಡಿಸಿದ ಪ್ರತಿಭಟನಾಕಾರರು
ಮಂಗಳೂರು, ಜೂ.28: ನಗರದ ಬಂಟ್ಸ್ ಹಾಸ್ಟೆಲ್ ಸಮೀಪ ಕಾರ್ಯಚರಿಸುತ್ತಿರುವ ಪಾಪ್ ಟೆಟ್ಸ್ ಈಟೆರಿ ಹೊಟೇಲ್ ನಲ್ಲಿ ಆಹಾರ ಸೇವಿಸಿದ ಕೇರಳದ ಕಾಸರಗೋಡಿನ 22ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದ ಹಿನ್ನೆಲೆಯಲ್ಲಿ ಕಾಸರಗೋಡು ಜಿಪಂ ಸದಸ್ಯರೊಬ್ಬರು ಪ್ರತಿಭಟನೆ ನಡೆಸಿ, ಗುರುವಾರ ರಾತ್ರೋರಾತ್ರಿ ಹೊಟೇಲ್‌ನ್ನು ಬಂದ್ ಮಾಡಿಸಿದ್ದಾರೆ.
ಅಸ್ವಸ್ಥಗೊಂಡವರ ಪೈಕಿ ಇಬ್ಬರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.
ಪಾಪ್ ಟೆಟ್ಸ್ ಈಟೆರಿ ಹೊಟೇಲ್ ನಲ್ಲಿ ಜೂ. 23ರಂದು ಕಾಸರಗೋಡು ನಿವಾಸಿಗಳು ಆಹಾರ ಸೇವಿಸಿ ಸುಮಾರು 22ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದಾರೆ ಎಂದು ಆರೋಪಿಸಿ ಕಾಸರಗೋಡು ಜಿಪಂ ಸದಸ್ಯರೊಬ್ಬರ ನೇತೃತ್ವದಲ್ಲಿ ಗುರುವಾರ ಹೊಟೇಲ್‌ಗೆ ಆಗಮಿಸಿದ ಸಂತ್ರಸ್ತರು ಈ ಬಗ್ಗೆ ಪ್ರಶ್ನಿಸಿದ್ದರು. ಆದರೆ ಹೊಟೇಲ್ ಮಾಲಕತ್ವದಿಂದ ಸೂಕ್ತ ಉತ್ತರ ಸಿಕ್ಕಿರಲಿಲ್ಲ. ಇದರಿಂದ ಆಕ್ರೋಶಗೊಂಡ ಸಂತ್ರಸ್ತರು ರಾತ್ರಿ ಹೊಟೇಲ್ ಎದುರು ಪ್ರತಿಭಟನೆಗೆ ಮುಂದಾದರು.
ನಂತರ ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಹಿರಿಯ ಆರೋಗ್ಯ ಅಧಿಕಾರಿ ಮಂಜಯ್ಯ ಶೆಟ್ಟಿ ಎದುರು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ತೆರೆದಿದ್ದ ಹೊಟೇಲ್‌ನ್ನು ಬಂದ್ ಮಾಡಲಾಯಿತು. ಅಲ್ಲದೆ, ಪಾಲಿಕೆಯ ಆರೋಗ್ಯ ವಿಭಾಗದ ತಂಡ ಹೊಟೇಲ್‌ಗೆ ಬೀಗ ಹಾಕಿತು.
ವಿವಿಧ ಆಸ್ಪತ್ರೆಗಳಿಗೆ ದಾಖಲು
ಮಂಜೇಶ್ವರದ ಸ್ವರ್ಣೋದ್ಯಮಿ ಕುಟುಂಬ ಸೇರಿದಂತೆ ಹಲವು ಮಂದಿ ರವಿವಾರ ಈ ಹೊಟೇಲ್‌ನಲ್ಲಿ ಆಹಾರ ಸೇವಿಸಿ ತೆರಳಿದ್ದರು. ಬಳಿಕ ಆಹಾರ ಸೇವಿಸಿದ ಎಲ್ಲರೂ ಅಸ್ವಸ್ಥರಾಗಿದ್ದರು. ಇವರಲ್ಲಿ ಹಲವರು ಕಲ್ಲಡ್ಕ, ದೇರಳಕಟ್ಟೆ ಹಾಗೂ ಕಾಸರಗೋಡಿನ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಅಸ್ವಸ್ಥಗೊಂಡವರ ಪೈಕಿ ಇಬ್ಬರಿಗೆ ಶಸ್ತ್ರಚಿಕಿತ್ಸೆ ನೀಡಲಾಗಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಸಂತ್ರಸ್ತ ಕುಟುಂಬದ ಮೂಲಗಳು ತಿಳಿಸಿವೆ.
ಹೊಟೇಲ್‌ವೊಂದರಲ್ಲಿ ಆಹಾರ ಸೇವಿಸಿ ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಮಂಗಳೂರು ಮಹಾನಗರ ಪಾಲಿಕೆಯ ಹಿರಿಯ ಆರೋಗ್ಯಾಧಿಕಾರಿ ಮಂಜಯ್ಯ ಶೆಟ್ಟಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದ್ದೇವೆ. ತಪ್ಪಿಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದೇವೆ.
- ಹೆಸರು ಬಹಿರಂಗಪಡಿಸಲು ಇಚ್ಛಿಸದ ಸಂತ್ರಸ್ತ
ಮಂಗಳೂರಿನ ಹೊಟೇಲ್‌ವೊಂದರಲ್ಲಿ ಆಹಾರ ಸೇವಿಸಿದ ಕೇರಳದ ಕಾಸರಗೋಡಿನ ಹಲವು ಮಂದಿ ಅಸ್ವಸ್ಥಗೊಂಡಿದ್ದರು. ಘಟನೆ ಇತ್ತೀಚೆಗೆ ನಡೆದಿದ್ದು, ಗುರುವಾರ ತಮ್ಮ ಗಮನಕ್ಕೆ ಬಂದಿತ್ತು. ಕೂಡಲೇ ಹೊಟೇಲ್‌ಗೆ ಬೀಗ ಹಾಕಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
- ಮಂಜಯ್ಯ ಶೆಟ್ಟಿ, ಹಿರಿಯ ಆರೋಗ್ಯಾಧಿಕಾರಿ, ಮಂಗಳೂರು ಮಹಾನಗರ ಪಾಲಿಕೆ