ದುಬೈ: ಭಾರತೀಯ ಕಾರ್ಮಿಕರಿಗೆ ಹಲವು ತಿಂಗಳಿಂದ ವೇತನವಿಲ್ಲ

Update: 2019-06-28 16:27 GMT

ದುಬೈ, ಜೂ. 28: ದುಬೈಯ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 300ಕ್ಕೂ ಅಧಿಕ ಭಾರತೀಯ ವಲಸಿಗರ ಸಮಸ್ಯೆಯನ್ನು ಪರಿಹರಿಸಲು ದುಬೈಯಲ್ಲಿರುವ ಭಾರತೀಯ ಕೌನ್ಸುಲೇಟ್ ಜನರಲ್ ಮುಂದೆ ಬಂದಿದೆ.

ಈ ವಲಸಿಗರಿಗೆ ಹಲವು ತಿಂಗಳು ವೇತನ ನೀಡಲಾಗಿಲ್ಲ.

ಕಾರ್ಮಿಕರು ತೀವ್ರ ಆಹಾರದ ಕೊರತೆಯನ್ನು ಎದುರಿಸುತ್ತಿದ್ದಾರೆ ಹಾಗೂ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೆಚ್ಚಿನವರು ಭಾರತಕ್ಕೆ ವಾಪಸಾಗಲು ಬಯಸಿದ್ದಾರೆ, ಆದರೆ, ಅವರ ವೀಸಾಗಳ ಅವಧಿ ಮುಗಿದಿದೆ ಹಾಗೂ ಅವುಗಳನ್ನು ನವೀಕರಿಸಲು ಉದ್ಯೋಗದಾತ ನಿರಾಕರಿಸಿದ್ದಾರೆ.

ಕೌನ್ಸುಲೇಟ್ ಅಧಿಕಾರಿಗಳ ತಂಡವೊಂದು ಕಂಪೆನಿಯ ಕಚೇರಿಗೆ ಭೇಟಿ ನೀಡಿದೆ ಹಾಗೂ ಉದ್ಯೋಗದಾತರೊಂದಿಗೆ ಮಾತುಕತೆ ನಡೆಸಿದೆ ಎಂದು ಭಾರತೀಯ ಕೌನ್ಸುಲ್ ಜನರಲ್ ವಿಪುಲ್ ಗುರುವಾರ ‘ಖಲೀಜ್ ಟೈಮ್ಸ್’ಗೆ ತಿಳಿಸಿದರು. ಸಮಸ್ಯೆಯನ್ನು ಶೀಘ್ರ ಇತ್ಯರ್ಥಪಡಿಸುವ ಭರವಸೆಯನ್ನು ಅವರು ನೀಡಿದರು.

‘‘ವ್ಯವಹಾರದಲ್ಲಿ ಸಮಸ್ಯೆಗಳು ಎದುರಾದ ಹಿನ್ನೆಲೆಯಲ್ಲಿ, ಕಾರ್ಮಿಕರಿಗೆ ಸಂಬಳ ನೀಡಲು ಅಸಾಧ್ಯವಾಗಿದೆ ಎಂಬುದಾಗಿ ಕಂಪೆನಿಯ ಧಣಿ ಹೇಳಿದ್ದಾರೆ. ಆದಾಗ್ಯೂ, ಶೀಘ್ರವೇ ಸಮಸ್ಯೆಯನ್ನು ಇತ್ಯರ್ಥಪಡಿಸುವ ಭರವಸೆಯನ್ನು ನೀಡಿದ್ದಾರೆ ಹಾಗೂ ಕೆಲವು ಕಾರ್ಮಿಕರಿಗೆ ಈಗಾಗಲೇ ಒಂದು ತಿಂಗಳ ಸಂಬಳವನ್ನು ಪಾವತಿಸಿದ್ದಾರೆ. ಎಲ್ಲ ಕಾರ್ಮಿಕರ ಬಾಕಿ ವೇತನವನ್ನು ಶೀಘ್ರದಲ್ಲೇ ನೀಡುವುದಾಗಿ ಹೇಳಿದ್ದಾರೆ. ನಾವು ಅವರೊಂದಿಗೆ ಈ ವಿಷಯದಲ್ಲಿ ಸಂಪರ್ಕದಲ್ಲಿರುತ್ತೇವೆ’’ ಎಂದು ವಿಪುಲ್ ಹೇಳಿದರು.

ತಕ್ಷಣದ ಪರಿಹಾರವಾಗಿ, ಅಬುಧಾಬಿಯ ದತ್ತಿ ಸಂಸ್ಥೆ ದಾರ್ ಅಲ್ ಬೆರ್ ಸೊಸೈಟಿಯು ಕಾರ್ಮಿಕರಿಗೆ ಆಹಾರ ಪದಾರ್ಥಗಳನ್ನು ನೀಡಿದೆ ಹಾಗೂ ಬುಧವಾರ ಅವರಿಗಾಗಿ ವೈದ್ಯಕೀಯ ಶಿಬಿರವೊಂದನ್ನು ಏರ್ಪಡಿಸಿದೆ.

ಒಂದು ವರ್ಷದಿಂದ ಸಮಸ್ಯೆ ಆರಂಭವಾಗಿದೆ ಎಂಬುದಾಗಿ ಕಾರ್ಮಿಕರು ಹೇಳುತ್ತಾರೆ. ಅಂದಿನಿಂದ ತಮ್ಮ ವೇತನ ಪಾವತಿ ವಿಳಂಬವಾಗುತ್ತಾ ಬಂದಿದೆ ಎಂದಿದ್ದಾರೆ.

ತಮಗೆ ಮೂರು ತಿಂಗಳಿಂದ ಸಂಬಳ ಸಿಕ್ಕಿಲ್ಲ ಎಂದು ಕೆಲವು ಕಾರ್ಮಿಕರು ಹೇಳಿದರೆ, 5 ಅಥವಾ ಹೆಚ್ಚು ತಿಂಗಳಿಂದ ವೇತನ ಸಿಕ್ಕಿಲ್ಲ ಎಂದು ಇನ್ನು ಹಲವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News