×
Ad

ರಾಹುಲ್ ಬೆಂಬಲಿಸಿ 130ಕ್ಕೂ ಹೆಚ್ಚು ಕಾಂಗ್ರೆಸ್ ಪದಾಧಿಕಾರಿಗಳ ರಾಜೀನಾಮೆ

Update: 2019-06-28 22:46 IST

ಹೊಸದಿಲ್ಲಿ, ಜೂ.28: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭಾರೀ ಸೋಲಾಗಿರುವ ಹಿನ್ನೆಲೆಯಲ್ಲಿ ಮತ್ತು ಪಕ್ಷಾಧ್ಯಕ್ಷತೆ ತ್ಯಜಿಸುವ ರಾಹುಲ್ ಗಾಂಧಿ ನಿರ್ಧಾರದ ಬಳಿಕ ಪಕ್ಷದ ಹುದ್ದೆಗೆ ರಾಜೀನಾಮೆ ನೀಡುವ ಪ್ರಕರಣ ಮುಂದುವರಿದಿದ್ದು, ಶುಕ್ರವಾರ 130ಕ್ಕೂ ಅಧಿಕ ಪದಾಧಿಕಾರಿಗಳು ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಶುಕ್ರವಾರ ದಿಲ್ಲಿಯಲ್ಲಿರುವ ಎಐಸಿಸಿ ಪ್ರಧಾನ ಕಚೇರಿಗೆ ಆಗಮಿಸಿದ 300ಕ್ಕೂ ಅಧಿಕ ಕಾಂಗ್ರೆಸ್ ಮುಖಂಡರು ದಿಢೀರ್ ಸಭೆ ನಡೆಸಿ ಕಾಂಗ್ರೆಸ್ ಪಕ್ಷದ ಸ್ಥಿತಿಗತಿಯ ಬಗ್ಗೆ ಚರ್ಚಿಸಿದರು. ಆದರೆ ಇಂತಹ ಬೆಳವಣಿಗೆಯ ಬಗ್ಗೆ ಕಾಂಗ್ರೆಸ್ ಹೈಕಮಾಂಡ್‌ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ವರದಿಯಾಗಿದೆ. ಸಭೆಯ ಬಳಿಕ 130ಕ್ಕೂ ಹೆಚ್ಚು ಪದಾಧಿಕಾರಿಗಳು ಹುದ್ದೆಗೆ ರಾಜೀನಾಮೆ ಘೋಷಿಸಿದರು. ದಿಲ್ಲಿ ಕಾಂಗ್ರೆಸ್ ಘಟಕಾಧ್ಯಕ್ಷೆ ಶೀಲಾ ದೀಕ್ಷಿತ್ ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಜ್ಯದ ಎಲ್ಲಾ 280 ಬ್ಲಾಕ್ ಕಾಂಗ್ರೆಸ್ ಸಮಿತಿಗಳನ್ನು ವಿಸರ್ಜಿಸಿದ್ದಾರೆ.

ರಾಹುಲ್ ಗಾಂಧಿ ದಿಲ್ಲಿ ಘಟಕದ ಪದಾಧಿಕಾರಿಗಳನ್ನು ಭೇಟಿ ಮಾಡಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಒಗ್ಗೂಡಿ ಕಾರ್ಯನಿರ್ವಹಿಸುವಂತೆ ಸೂಚಿಸಿದ್ದಾರೆ. ಈ ಮಧ್ಯೆ ಹೇಳಿಕೆ ನೀಡಿರುವ ಹಿರಿಯ ಕಾಂಗ್ರೆಸ್ ಮುಖಂಡ ವೀರಪ್ಪ ಮೊಯ್ಲಿ, ರಾಹುಲ್ ಗಾಂಧಿ ಪಕ್ಷಾಧ್ಯಕ್ಷತೆಯಲ್ಲಿ ಮುಂದುವರಿಯುವ ಸಾಧ್ಯತೆ ಶೇ.1ರಷ್ಟೂ ಇಲ್ಲ ಎಂದಿದ್ದಾರೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿ ರಾಹುಲ್ ಅವರ ರಾಜೀನಾಮೆ ಅಂಗೀಕರಿಸುವವರೆಗೂ ಊಹಾಪೋಹ ಮುಂದುವರಿಯುತ್ತದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News