ಮರಾಠ ಮೀಸಲಾತಿ: ಸರ್ವೋಚ್ಚ ನ್ಯಾಯಾಲಯದಲ್ಲಿ ಮನವಿ ದಾಖಲಿಸಿದ ಮಹಾರಾಷ್ಟ್ರ
ಮುಂಬೈ, ಜೂ.28: ಮರಾಠ ಸಮುದಾಯಕ್ಕೆ ಮೀಸಲಾತಿ ಬಗ್ಗೆ ಬಾಂಬೆ ಉಚ್ಚ ನ್ಯಾಯಾಲಯ ನೀಡಿದ ತೀರ್ಪಿಗೆ ಸಂಬಂಧಿಸಿ ಮಹಾರಾಷ್ಟ್ರ ಸರಕಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಕ್ಯಾವಿಯೆಟ್ ದಾಖಲಿಸಿದೆ.
ಉಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ಯಾವುದೇ ಮೇಲ್ಮನವಿಗಳು ಇದ್ದರೆ ರಾಜ್ಯ ಸರಕಾರದ ಗಮನಕ್ಕೆ ತರದೆ ತೀರ್ಪನ್ನು ನೀಡುವುದಿಲ್ಲ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಲು ಸರಕಾರ ಈ ಕ್ಯಾವಿಯೆಟ್ ದಾಖಲಿಸಿದೆ. ಉಚ್ಚ ನ್ಯಾಯಾಲಯ ಗುರುವಾರ ನೀಡಿದ ತೀರ್ಪಿನಲ್ಲಿ, ಶೈಕ್ಷಣಿಕ ಸಂಸ್ಥೆಗಳು ಮತ್ತು ಸಾರ್ವಜನಿಕ ಸೇವೆಗಳ ಉದ್ಯೋಗಗಳಲ್ಲಿ ಮರಾಠ ಸಮುದಾಯಕ್ಕೆ ಮೀಸಲಾತಿಯನ್ನು ನೀಡುವ ರಾಜ್ಯ ಸರಕಾರದ ನಿರ್ಧಾರವನ್ನು ಎತ್ತಿಹಿಡಿದಿತ್ತು. ಆದರೆ ಮೀಸಲಾತಿ ಪ್ರಮಾಣವನ್ನು ಮಾತ್ರ ಶೇ.16ರಿಂದ ಶೇ.12-13ಕ್ಕೆ ಇಳಿಸುವಂತೆ ಸೂಚಿಸಿತ್ತು. ಮರಾಠ ಸಮುದಾಯಕ್ಕೆ ಮೀಸಲಾತಿ ನೀಡುವ ರಾಜ್ಯ ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ಹಲವರು ಮೇಲ್ಮನವಿ ದಾಖಲಿಸಿದ್ದರು. ಮೀಸಲಾತಿ ಶೇ.50 ಮೀರಬಾರದು ಎಂಬ ಶ್ರೇಷ್ಠ ನ್ಯಾಯಾಲಯದ ತೀರ್ಪನ್ನು ಇದು ಉಲ್ಲಂಘಿಸುತ್ತದೆ ಎಂದು ಮನವಿದಾರರು ವಾದಿಸಿದ್ದರು. ಮೀಸಲಾತಿ ಶೇ.50 ಮೀರಬಾರದು ಎಂಬ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಬಗ್ಗೆ ಮಾಹಿತಿಯಿದೆ. ಆದರೆ ಮೀಸಲಾತಿಯು ಪರಿಮಾಣಾತ್ಮಕ ದತ್ತಾಂಶಗಳನ್ನು ಆಧರಿಸಿದೆ ಎಂದಾದರೆ ಶೇ.50ನ್ನು ಮೀರಬಹುದು ಎಂದು ಬಾಂಬೆ ಉಚ್ಚ ನ್ಯಾಯಾಲಯ ತಿಳಿಸಿತ್ತು.