×
Ad

ಹಿರಿಯಡ್ಕ: 200 ವರ್ಷಗಳ ಹಳೆಯ ಸರಕಾರಿ ಬಾವಿ ಕುಸಿತ

Update: 2019-06-28 22:55 IST

ಉಡುಪಿ, ಜೂ.28: ಹಿರಿಯಡಕ ಬಸ್ ನಿಲ್ದಾಣದ ಸಮೀಪದಲ್ಲಿ ಇರುವ 200 ವರ್ಷ ಹಳೆಯ ಸರಕಾರಿ ಬಾವಿಯೊಂದು ಆವರಣ ಸಹಿತ ಸಂಪೂರ್ಣ ಕುಸಿದು ಬಿದ್ದ ಘಟನೆ ಜೂ.28ರಂದು ಸಂಜೆ 4ಗಂಟೆ ಸುಮಾರಿಗೆ ನಡೆದಿದೆ.

ಮಳೆಯ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ಸುಮಾರು 30-40 ಅಡಿ ಆಳದ ಈ ಬಾವಿಯ ಒಳಭಾಗದಲ್ಲಿ ಕುಸಿತ ಕಂಡಿತ್ತು. ಅಪಾಯವನ್ನು ಅರಿತ ಬೊಮ್ಮರಬೆಟ್ಟು ಗ್ರಾಪಂನವರು ಬಾವಿ ಸಮೀಪ ಯಾರು ಕೂಡ ಸುಳಿಯದಂತೆ ಕ್ರಮ ವಹಿಸಿದ್ದರು. ತಹಶೀಲ್ದಾರ್ ಸಹಿತ ಇತರ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು.

ನೀರು ತುಂಬಿರುವ ಬಾವಿ ಇದೀಗ ಆವರಣ ಸಹಿತ ಸಂಪೂರ್ಣ ಕುಸಿದು ಬಿದ್ದಿದೆ. ಈವರೆಗೆ ಬತ್ತದ ವರ್ಷ ಇಡೀ ನೀರಿನಿಂದ ಕೂಡಿದ ಈ ಬಾವಿಯನ್ನು ಸ್ಥಳೀಯರು ‘ಧರ್ಮದ ಬಾವಿ’ ಎಂದೇ ಕರೆಯುತ್ತಿದ್ದರು. ಕಳೆದ ಎರಡು ದಿನಗಳ ಹಿಂದಿನವರೆಗೂ ಈ ಬಾವಿಯ ನೀರನ್ನು ಸುತ್ತಮುತ್ತಲಿನ ಅಂಗಡಿಯವರು, ಹೊಟೇಲಿನವರು ಬಳಕೆ ಮಾಡುತ್ತಿದ್ದರೆನ್ನಲಾಗಿದೆ.

ಬಾವಿ ಕುಸಿದಿರುವ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್, ಬೊಮ್ಮರಬೆಟ್ಟು ಗ್ರಾಪಂನವರು ಹಾಗೂ ಹಿರಿಯಡ್ಕ ಪೊಲೀಸರು ಪರಿಶೀಲನೆ ನಡೆಸಿದರು. ಹಿರಿಯಡ್ಕ ದೇವಸ್ಥಾನದ ಎದುರು ಮತ್ತು ಬಸ್ ನಿಲ್ದಾಣದ ಮಧ್ಯಭಾಗದಲ್ಲಿರುವುದರಿಂದ ಸುರಕ್ಷತೆಯ ದೃಷ್ಛಿಯಿಂದ ಇಡೀ ಬಾವಿಯನ್ನು ಮುಚ್ಚಲು ಅಧಿಕಾರಿಗಳು ನಿರ್ಧರಿಸಿದರು.

ಅದರಂತೆ ಮಣಿಪಾಲದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಜೆಸಿಬಿ, ಟಿಪ್ಪರನ್ನು ಹಿರಿಯಡ್ಕಕ್ಕೆ ತರಿಸಿ ಸುಮಾರು 15-20 ಲೋಡ್‌ಗಳಷ್ಟು ಮಣ್ಣು ಹಾಕಿ ಇಡೀ ಬಾವಿಯನ್ನು ಮುಚ್ಚಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News