×
Ad

ಸಹೋದರಿಯ ಕೊಲೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ

Update: 2019-06-28 22:59 IST

ಕುಂದಾಪುರ, ಜೂ.28: ಹಣಕ್ಕಾಗಿ ಸಹೋದರಿಯನ್ನು ಕೊಲೆಗೈದ ಪ್ರಕರಣದ ಆರೋಪಿ ವಡೇರಹೊಬಳಿ ಗ್ರಾಮದ ಕುಂದೇಶ್ವರ ದೇವಸ್ಥಾನ ಹಿಂಭಾಗದ ನಿವಾಸಿ ಅಣ್ಣಪ್ಪಭಂಡಾರಿ(45)ಗೆ ಕುಂದಾಪುರ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಇಂದು ತೀರ್ಪು ನೀಡಿದೆ.

ಈತ 2018ರ ಜುಲೈ 22ರಂದು ರಾತ್ರಿ ಅಣ್ಣಪ್ಪಭಂಡಾರಿ ಮದ್ಯ ಸೇವಿಸಿ ಮನೆಗೆ ಬಂದು ಮನೆಯಲ್ಲಿದ್ದ ಸಹೋದರಿ ವಿಜಯಾ ಭಂಡಾರಿ(50) ಎಂಬವರೊಂದಿಗೆ ಜಗಳ ಮಾಡಿದ್ದನು. ಅದೇ ಸಿಟ್ಟಿನಲ್ಲಿ ಆತ ವಿಜಯಾ ಅವರಿಗೆ ಕತ್ತಿಯಲ್ಲಿ ಗಂಭೀರವಾಗಿ ಹಲ್ಲೆ ನಡೆಸಿದ್ದನು. ಹಲ್ಲೆಯಿಂದ ಗಂಭೀರ ವಾಗಿ ಗಾಯಗೊಂಡ ವಿಜಯಾ ಭಂಡಾರಿ ಚಿಕಿತ್ಸೆ ಫಲಕಾರಿಯಾಗದೆ ಜು.28 ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಈ ಬಗ್ಗೆ ಕೊಲೆ ಪ್ರಕರಣ ದಾಖಲಿಸಿಕೊಂಡ ಕುಂದಾಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದ ಕುಂದಾಪುರ ವೃತ್ತ ನಿರೀಕ್ಷಕ ಮಂಜಪ್ಪ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಕುಂದಾಪುರ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶ ಪ್ರಕಾಶ ಖಂಡೇರಿ ಮನೆಗೆ ಅಕ್ರಮ ಪ್ರವೇಶ(ಐಪಿಸಿ ಸೆಕ್ಷನ್ 448) ಹಾಗೂ ಕೊಲೆ (ಐಪಿಸಿ ಸೆಕ್ಷನ್ 302) ಪ್ರಕರಣದಡಿಯಲ್ಲಿ ಆರೋಪಿಯನ್ನು ದೋಷಿಯೆಂದು ಜೂ.22ರಂದು ತೀರ್ಪು ನೀಡಿ, ಶಿಕ್ಷೆಯ ಪ್ರಮಾಣವನ್ನು ಜೂ.28ರಂು ಪ್ರಕಟಿಸುವುದಾಗಿ ಆದೇಶಿಸಿದರು.

ಅದರಂತೆ ಇಂದು ನ್ಯಾಯಾಧೀಶರು ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 40ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದರು. ಮನೆಯೊಳಗೆ ಅಕ್ರಮ ಪ್ರವೇಶ ಮಾಡಿದ್ದಕ್ಕೆ ಒಂದು ವರ್ಷ ಜೈಲು ಶಿಕ್ಷೆ ಮತ್ತು ದಂಡ ಪಾವತಿ ಸಲು ತಪ್ಪಿದಲ್ಲಿ 4 ತಿಂಗಳ ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಲಾಗಿದೆ.

ಈ ಪ್ರಕರಣ ನಡೆದು 11 ತಿಂಗಳಾಗಿದ್ದು, ಒಂದು ವರ್ಷದೊಳಗೆ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿ ತಪ್ಪಿತಸ್ಥನೆಂದು ತೀರ್ಪು ನೀಡಿರುವುದು ವಿಶೇಷವಾಗಿದೆ. ಪ್ರಾಸಿಕ್ಯೂಶನ್ ಪರ ಜಿಲ್ಲಾ ಸರಕಾರಿ ಅಭಿಯೋಜಕ ಬೇಳೂರು ಪ್ರಕಾಶ್ಚಂದ್ರ ಶೆಟ್ಟಿ ವಾದ ಮಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News