×
Ad

ಮುಡಿಪು ಪೇಟೆಯನ್ನು ಮಾದರಿಯಾಗಿ ಅಭಿವೃದ್ಧಿಗೊಳಿಸಲಾಗುವುದು: ಯು.ಟಿ.ಖಾದರ್

Update: 2019-06-28 23:21 IST

ಕೊಣಾಜೆ: ಮುಡಿಪು ಹೋಬಳಿಯಾದರೂ ಅತ್ಯಂತ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶವಾಗಿದ್ದು ಭವಿಷ್ಯದ ದೃಷ್ಟಿಯಿಂದ ಇಲ್ಲಿಗೆ ಉತ್ತಮ ವ್ಯವಸ್ಥೆ ಕಲ್ಪಿಸಿಕೊಡುವ ಸಲುವಾಗಿ ಮುಡಿಪು ಪೇಟೆಯನ್ನು ರಾಜ್ಯಕ್ಕೆ ಮಾದರಿಯಾಗಿ ಅಭಿವೃದ್ಧಿಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದರು.

ಮುಡಿಪು ಪೇಟೆಯ ರಸ್ತೆ ಅಗಲೀಕರಣ ಹಾಗೂ ಮುಡಿಪು ಪೇಟೆಯನ್ನು ಅತ್ಯಾಧುನಿಕ ರೀತಿಯಲ್ಲಿ ಸಮಗ್ರವಾಗಿ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಸಚಿವ ಯು.ಟಿ. ಖಾದರ್ ಅವರು ನೈಸ್ ಸಂಸ್ಥೆಯ ಎಂಜಿನಿಯರ್ ಪ್ರಸಾದ್, ಇನ್‍ಫೆÇೀಸಿಸ್ ಸಂಸ್ಥೆಯ ಜನರಲ್ ಮೆನೇಜರ್ ಹರೀಶ್ ಮುಲ್ಕಿ, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಮುಡಿಪು ಆಸುಪಾಸಿನ ಕಟ್ಟಡ ಹಾಗೂ ಅಂಗಡಿ ಮಾಲೀಕರು ಹಾಗೂ ವರ್ತಕರ ಜೊತೆಗೆ ಮುಡಿಪು ಶ್ರೀ ಗೋಪಾಲಕೃಷ್ಣ ದೇವಸ್ಥಾನದಿಂದ ಜಂಕ್ಷನ್ ವರೆಗೆ ರಸ್ತೆ ಅಗಲೀಕರಣ ಕಾಮಗಾರಿಯನ್ನು ಕಾಲ್ನಡಿಗೆಯಲ್ಲಿ ಪರಿಶೀಲನೆ ನಡೆಸಿ ಸ್ಥಳೀಯ ವರ್ತಕರಲ್ಲಿ ಅಭಿವೃದ್ಧಿಗೆ ಸಹಕಾರ ಕೋರಿದರು.

ಮುಡಿಪು ಶ್ರೀ ಗೋಪಾಲಕೃಷ್ಣ ದೇವಸ್ಥಾನದಿಂದ ಜಂಕ್ಷನ್ ತನಕ ಚತುಷ್ಪಥ ರಸ್ತೆ ಮಂಜೂರುಗೊಂಡಿದ್ದು ನಂತರದ ಭಾಗ ಮುಡಿಪು ಪೇಟೆಗೆ ಒಳಪಟ್ಟಿದೆ. ಮುಡಿಪು ಪೇಟೆ ಅಗಲೀಕರಣ ಸಂದರ್ಭದಲ್ಲಿ ವೈಜ್ಞಾನಿಕವಾಗಿ ಮತ್ತು ಪೇಟೆಯನ್ನು ಸುವ್ಯವಸ್ಥಿತವಾಗಿ ಅಭಿವೃದ್ಧಿಗೊಳಿಸುವ ಉದ್ದೇಶದಿಂದ ಲೊಕೋಪಯೋಗಿ ಇಲಾಖೆಯ ಎಂಜಿನಿಯರ್‍ಗಳ ಸಲಹೆಯ ಜೊತೆಗೆ ನೈಸ್ ಸಂಸ್ಥೆಯ ತಾಂತ್ರಿಕ ಸಲಹೆಗಾರ ಪ್ರಸಾದ್ ಎಂಜಿನಿಯರ್ ಅವರ ಮಾರ್ಗದರ್ಶನದಲ್ಲಿ ಮುಡಿಪು ಪೇಟೆಯಲ್ಲಿ ಆಟೋ ನಿಲ್ದಾಣ, ಪ್ರವಾಸಿ ವಾಹನಗಳಿಗೆ ಪಾರ್ಕಿಂಗ್, ಬಸ್ ತಂಗುದಾಣ, ಟೆಂಪೊ, ಕಾರು ತಂಗುದಾಣ, ಮಳೆ ನೀರು ಹರಿಯಲು ಸಮರ್ಪಕ ವ್ಯವಸ್ಥೆಯನ್ನು ಒಳಗೊಂಡ ಮಾದರಿ ನಕ್ಷೆಯನ್ನು ರಚಿಸಲಾಗಿದೆ. ಅದಕ್ಕೆ ತಗಲುವ ಅಂದಾಜು ವೆಚ್ಚವನ್ನು ಇನ್ ಫೋಸಿಸ್ ಸಂಸ್ಥೆಯ ಮುಖ್ಯಸ್ಥರಾದ ರಾಮದಾಸ್ ಕಾಮತ್ ಅವರ ಜೊತೆಗೆ ಮಾತುಕತೆ ನಡೆಸಿದ್ದು ಸಂಸ್ಥೆ ಆರ್ಥಿಕ ನೆರವು ನೀಡುವ ಭರವಸೆ ನೀಡಿದ್ದಾರೆ. ಅದಕ್ಕೆ ಸ್ಥಳೀಯರಾದ ಹರೀಶ್ ಮುಲ್ಕಿ ಹಾಗೂ ದೀರಜ್ ಅವರು ಸಹಕರಿಸುತ್ತಿದ್ದಾರೆ. ಇನ್ನುಳಿದಂತೆ ಹೆಚ್ಚುವರಿ ಅನುದಾನವನ್ನು ಲೋಕೋಪಯೋಗಿ ಇಲಾಖೆ ಭರಿಸುವಂತೆ ಸಚಿವ ಎಚ್.ಡಿ. ರೇವಣ್ಣ ಅವರ ಜೊತೆಗೆ ಮಾತುಕತೆ ನಡೆಸಿದ್ದು ಅವರು ಅನುದಾನ ಬಿಡುಗಡೆಗೆ ಒಪ್ಪಿದ್ದಾರೆ. ಈಗಾಗಲೇ ಮುಡಿಪು ಪೇಟೆಗೆ ಸಂಪರ್ಕಿಸುವ ಕೋಟೆಕಾರು ಪಾತೂರು ಮುಖ್ಯ ರಸ್ತೆಯ ಎರಡೂವರೆ ಕಿ. ಮೀ. ರಸ್ತೆಯನ್ನು ಅತ್ಯಾಧುನಿಕ ರೀತಿಯಲ್ಲಿ ಚತುಷ್ಪಥಗೊಳಿಸಲಾಗಿದ್ದು ಇನ್ ಫೋಸಿಸ್  ಸಂಸ್ಥೆಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದರು.

ನೈಸ್ ತಾಂತ್ರಿಕ ಸಂಸ್ಥೆಯ ಎಂಜಿನಿಯರ್ ಪ್ರಸಾದ್, ಇನ್ ಫೋಸಿಸ್  ಸಂಸ್ಥೆಯ ಜನರಲ್ ಮೆನೇಜರ್ ಹರೀಶ್ ಮುಲ್ಕಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ರವೀಂದ್ರನಾಥ್ ಶೆಟ್ಟಿ, ಜಿಲ್ಲಾ ಪಂಚಾಯಿತಿ ಎಂಜಿನಿಯರ್ ರವಿಚಂದ್ರ, ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ, ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಸದಸ್ಯ ಹೈದರ್ ಕೈರಂಗಳ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ ಕಾಜವ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ, ಇರಾ ಗ್ರಾಮ ಪಂಚಾಯಿತಿ ಅಧ್ಯಕ್ಷ ರಝಾಕ್ ಕುಕ್ಕಾಜೆ, ಬಾಳೆಪುಣಿ ಗ್ರಾಮ ಪಂಚಾಯಿತಿ ಸದಸ್ಯ ನಾಸೀರ್ ನಡುಪದವು, ಶರೀಫ್ ಚೆಂಬೆತೋಟ  ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News