ಭಟ್ಕಳದಲ್ಲಿ ಮತ್ತೆ ಡೆಂಗ್ ಹಾವಳಿ ;10ಕ್ಕೇರಿದ ಪೀಡಿತರ ಸಂಖ್ಯೆ
ಭಟ್ಕಳ: ಜೂ.29, ಭಟ್ಕಳ ತಾಲೂಕಿನಲ್ಲಿ ಡೆಂಗ್ ಜ್ವರ ಮತ್ತೆ ಸದ್ದು ಮಾಡುತ್ತಿದ್ದು, ಜೂನ್ ತಿಂಗಳಲ್ಲಿ ಮತ್ತೆರಡು ಡೆಂಗ್ ಪ್ರಕರಣಗಳು ಬೆಳಕಿಗೆ ಬಂದಿದ್ದು, ಒಟ್ಟು ಡೆಂಗ್ ಜ್ವರ ಪೀಡಿತರ ಸಂಖ್ಯೆ 10ಕ್ಕೇರಿದಂತಾಗಿದೆ.
ಮುಂಡಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೊಗೇರಕೇರಿಯಲ್ಲಿ ಓರ್ವ ವ್ಯಕ್ತಿ ಡೆಂಗ್ ಪೀಡಿತರಾಗಿದ್ದು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿಯಿದೆ. ಬೆಂಗಳೂರಿನಿಂದ ಊರಿಗೆ ಮರಳಿದ ಮೂಡಶಿರಾಲಿಯ ಯುವಕನೂ ಡೆಂಗ್ ಪೀಡಿತನಾಗಿರುವುದು ಖಚಿತಗೊಂಡಿದೆ.
ತಾಲೂಕು ಆರೋಗ್ಯಾಧಿಕಾರಿ ಡಾ.ಮೂರ್ತಿರಾಜ್ ಭಟ್ ಹಾಗೂ ಹಿರಿಯ ಆರೋಗ್ಯ ಶಿಕ್ಷಣಾಧಿಕಾರಿ ಈರಯ್ಯ ದೇವಾಡಿಗ ತಮ್ಮ ಸಿಬ್ಬಂದಿಯೊಡನೆ ಡೆಂಗ್ ಪೀಡಿತ ಯುವಕನ ಮನೆಗೆ ತೆರಳಿ ಪರಿಶೀಲನೆ ನಡೆಸಿದ್ದು ಅಗತ್ಯ ಸಲಹೆ ಸೂಚನೆಗಳನ್ನು ನೀಡಿದ್ದಾರೆ.
ಈ ಕುರಿತು ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿರುವ ಆರೋಗ್ಯಾಧಿಕಾರಿ ಡಾ.ಮೂರ್ತಿರಾಜ್ ಭಟ್, ಭಟ್ಕಳದಲ್ಲಿ ದಾಖಲಾಗಿರುವ ಹೆಚ್ಚು ಪ್ರಕರಣಗಳಲ್ಲಿ ಡೆಂಗ್ ಪೀಡಿತರು ಬೇರೆ ಜಿಲ್ಲೆಯಲ್ಲಿ ನೆಲೆಸಿದ್ದು ಎಲ್ಲರು ಚಿಕಿತ್ಸೆಯ ನಂತರ ಚೇತರಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರತಿಯೊಬ್ಬರೂ ಮನೆಯ ಸುತ್ತಲಿನ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳುವುದರ ಜತೆಗೆ ಮಳೆಗಾಲದಲ್ಲಿ ನೀರು ಒಂದೆಡೆ ಶೇಖರಣೆಯಾಗದಂತೆ ಎಚ್ಚರಿಕೆಯನ್ನು ವಹಿಸಬೇಕು ಎಂಬ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಿದ್ದಾರೆ. ಅಲ್ಲದೆ, ಜ್ವರ ಬಂದ ಲಕ್ಷಣಗಳು ಕಂಡು ಬಂದಲ್ಲಿ ಯಾರೂ ಕೂಡ ನಿರ್ಲಕ್ಷ್ಯವನ್ನು ತಾಳದೆ ಸಮೀಪದ ಆಸ್ಪತ್ರೆಯನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕೆಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.