ಪೊಲೀಸರಿಂದ ದೌರ್ಜನ್ಯ ಆರೋಪ: ಬಾಲಕಿ ಆಸ್ಪತ್ರೆಗೆ ದಾಖಲು
ಪುತ್ತೂರು: ಚಿನ್ನ ಕಳ್ಳತನ ಆರೋಪದ ಹಿನ್ನಲೆಯಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೌರ್ಜನ್ಯ ಎಸಗಲಾಗಿದೆ ಎಂದು ಬಾಲಕಿಯೊಬ್ಬಳು ಆರೋಪಿಸಿದ್ದು, ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಆಕೆಯನ್ನು ದಾಖಲಿಸಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಇಬ್ಬರು ಮಹಿಳಾ ಸಿಬ್ಬಂದಿಗಳು ಸೇರಿದಂತೆ ಮೂವರನ್ನು ಅಮಾನತು ಮಾಡಲಾಗಿದೆ.
ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕೌಡಿಚ್ಚಾರ್ ಎಂಬಲ್ಲಿನ ನಿವಾಸಿ ಮಮ್ತಾಝ್ ಎಂಬವರ ಮನೆಯಿಂದ ಚಿನ್ನ ಕಳ್ಳತನವಾಗಿತ್ತು. ಈ ಬಗ್ಗೆ ಸ್ಥಳೀಯ ಬಾಲಕಿ ಹಾಗೂ ಆಕೆಯ ತಾಯಿಯನ್ನು ಪೊಲೀಸರು ವಿಚಾರಣೆಗೆ ಕರೆಸಿಕೊಂಡಿದ್ದರು ಎನ್ನಲಾಗಿದ್ದು, ವಿಚಾರಣೆ ವೇಳೆ ತನಗೆ ಚಿನ್ನ ಕದ್ದಿರುವುದನ್ನು ಒಪ್ಪಿಕೊಳ್ಳುವಂತೆ ಒತ್ತಡ ಹೇರಿದ್ದಾರೆ ಹಾಗೂ ಲಾಠಿಯಿಂದ ಹೊಡೆದಿದ್ದಾರೆ ಮತ್ತು ವಿದ್ಯುತ್ ಶಾಕ್ ನೀಡಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾರೆ.
ಚಿನ್ನ ಕಳ್ಳತದ ಆರೋಪದ ಹಿನ್ನಲೆಯಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲಿ ಅಪ್ತಾಪ್ತೆಗೆ ದೌರ್ಜನ್ಯ ನೀಡಿರುವ ಆರೋಪಕ್ಕೆ ಸಂಬಂಧಿಸಿ ಮೂವರು ಪೊಲೀಸರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಮಾನತುಗೊಳಿಸಿದ್ದಾರೆ. ಪೊಲೀಸ್ ಸಿಬ್ಬಂದಿಗಳಾದ ಗಾಯತ್ರಿ, ಪ್ರಶ್ನಿತಾ ಮತ್ತು ದಿನೇಶ್ ಅವರನ್ನು ಅಮಾನತುಗೊಳಿಸಲಾಗಿದೆ.