ಜುಲೈ 1ರಿಂದ ಸುಪ್ರೀಂ ಕೋರ್ಟ್ ಮರು ಆರಂಭ
ಹೊಸದಿಲ್ಲಿ, ಜೂ. 29: ಆರು ವಾರಗಳ ಬೇಸಿಗೆ ರಜೆ ಬಳಿಕ ಜುಲೈ 1ರಂದು ಮರು ಆರಂಭವಾಗಲಿರುವ ನ್ಯಾಯಾಲಯದಲ್ಲಿ ಅಯೋಧ್ಯೆ ಭೂ ವಿವಾದ, ರಫೇಲ್ ಹಗರಣದ ಮರು ಪರಿಶೀಲನಾ ಅರ್ಜಿ, ರಾಹುಲ್ ಗಾಂಧಿ ಅವರ ನ್ಯಾಯಾಂಗ ನಿಂದನೆ ಪ್ರಕರಣ ಸಹಿತ ಹಲವು ಅತಿಸೂಕ್ಷ್ಮ ಪ್ರಕರಣಗಳ ವಿಚಾರಣೆ ಆರಂಭವಾಗಲಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರ ನೇತೃತ್ವದಲ್ಲಿ 31 ನ್ಯಾಯಾಧೀಶರ ಪೂರ್ಣ ನ್ಯಾಯಾಂಗ ಬಲದೊಂದಿಗೆ ಕಾರ್ಯಾರಂಭವಾಗಲಿರುವ ಸುಪ್ರೀಂ ಕೋರ್ಟ್ ರಪೇಲ್ ಮರು ಪರಿಶೀಲನಾ ಅರ್ಜಿಯ ತೀರ್ಪು ನೀಡುವ ಸಾಧ್ಯತೆ ಇದೆ.
ಫಾನ್ಸ್‌ನಿಂದ 36 ರಫೇಲ್ ಯುದ್ಧ ವಿಮಾನಗಳ ಖರೀದಿ ಪ್ರಶ್ನಿಸಿ ಸಲ್ಲಿಸಲಾದ ಎಲ್ಲ ಮನವಿಯನ್ನು ತಿರಸ್ಕರಿಸಿರುವ 2018 ಡಿಸೆಂಬರ್ 14ರ ಸುಪ್ರೀಂ ಕೋರ್ಟ್ ತೀರ್ಪಿನ ಪುನರ್ ಪರಿಶೀಲನೆ ಕೋರಿ ಮಾಜಿ ಕೇಂದ್ರ ಸಚಿವ ಯಶ್ವಂತ್ ಸಿನ್ಹಾ ಹಾಗೂ ಅರುಣ್ ಶೌರಿ ದಾಖಲಿಸಿದ ಅರ್ಜಿಯನ್ನು ಕೂಡ ಇದು ಒಳಗೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ರಾಹುಲ್ ಗಾಂಧಿ ‘‘ಚೌಕಿದಾರ್ ಚೋರ್ ಹೈ’’ ಎಂದು ವ್ಯಂಗ್ಯವಾಡಿದ ಸಂದರ್ಭ ಸುಪ್ರೀಂ ಕೋರ್ಟ್ ಅನ್ನು ತಪ್ಪಾಗಿ ಉಲ್ಲೇಖಿಸಿದ ಕುರಿತಂತೆ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಅವರ ನ್ಯಾಯಾಂಗ ನಿಂದನೆ ಅರ್ಜಿಯನ್ನು ಕೂಡ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಮೂವರು ಸದಸ್ಯರ ಪೀಠ ವಿಚಾರಣೆ ನಡೆಸಲಿದೆ.
ರಾಜಕೀಯವಾಗಿ ಅತಿ ಸೂಕ್ಷ್ಮ ವಿಚಾರವಾದ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಭೂ ವಿವಾದ ಸೌಹಾರ್ದಯುತವಾಗಿ ಪರಿಹರಿಸಲು ಸುಪ್ರೀಂ ಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಎಫ್.ಎಂ.ಐ. ಕಲಿಫುಲ್ಲಾ ನೇತೃತ್ವದ ಮೂವರು ಸದಸ್ಯರ ಸಮಿತಿಯ ಕೆಮರಾ ಸಂಧಾನ ಕಲಾಪದ ಫಲಿತಾಂಶವನ್ನು ನ್ಯಾಯಾಲಯ ವೀಕ್ಷಿಸಲಿದೆ. ಇದಲ್ಲದೆ, ವಿದೇಶಿ ದೇಣಿಗೆಯ ಸ್ವೀಕಾರ ಹಾಗೂ ಬಳಕೆಗೆ ಸಂಬಂಧಿಸಿದ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಹೋರಾಟಗಾರ್ತಿ ಹಾಗೂ ನ್ಯಾಯವಾದಿ ಇಂದಿರಾ ಜೈಸಿಂಗ್, ಆನಂದ ಗ್ರೋವರ್ ಹಾಗೂ ಅವರ ಸರಕಾರೇತರ ಸಂಸ್ಥೆ ‘ಲಾಯರ್ಸ್ ಕಲೆಕ್ಟಿವ್’ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಹಾಗೂ ತನಿಖೆ ಆರಂಭಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಕೂಡ ಸುಪ್ರೀಂ ಕೋರ್ಟ್ ಆಲಿಕೆ ನಡೆಸಲಿದೆ.
ಜಮ್ಮು ಹಾಗೂ ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ನೀಡುವ ಹಾಗೂ ಈ ರಾಜ್ಯಕ್ಕೆ ಕಾನೂನು ರೂಪಿಸಲು ಸಂಸತ್ತಿನ ಅಧಿಕಾರವನ್ನು ಮಿತಗೊಳಿಸುವ ಕಲಂ 370ರ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ನ್ಯಾಯವಾದಿ ಹಾಗೂ ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ.