×
Ad

ಮಂಗಳೂರು: ಜೊಯಾಲುಕ್ಕಾಸ್ ನಲ್ಲಿ ವೈದ್ಯರ ದಿನಾಚರಣೆ

Update: 2019-06-29 21:19 IST

ಮಂಗಳೂರು, ಜೂ.29:ವೈದ್ಯರು ಮತ್ತು ಜನಸಾಮಾನ್ಯರ ನಡುವೆ ಉತ್ತಮ ಸಂಬಂಧ ಇರಬೇಕಾದ ಅಗತ್ಯವಿದೆ. ಸಮಾಜದಲ್ಲಿ ಈ ಹಿಂದೆ ಕುಟುಂಬದ ವೈದ್ಯರು ಗೌರವಯುತವಾದ ಸ್ಥಾನವನ್ನು ಪಡೆದಿದ್ದರು. ಅದೇ ರೀತಿಯ ಸ್ಥಾನವನ್ನು ವೈದ್ಯರು ಸಮಾಜದಲ್ಲಿ ಗಳಿಸಬೇಕಾಗಿದೆ ಎಂದು ಎಂದು ವೆನ್‌ಲಾಕ್ ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ರಾಜೇಶ್ವರಿ ತಿಳಿಸಿದ್ದಾರೆ.

ನಗರದ ಜೊಯಾಲುಕ್ಕಾಸ್ ಆಭರಣ ಮಳಿಗೆಯಲ್ಲಿಂದು ಹಮ್ಮಿಕೊಂಡ ವೈದ್ಯರ ದಿನಾಚರಣೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ದೇಶದ ಖ್ಯಾತ ವೈದ್ಯ ಡಾ.ಬಿದಾನ್ ಚಂದ್ರ ರಾಯ್ ಅವರ ಗೌರವಾರ್ಥ ವೈದ್ಯರ ದಿನವನ್ನು ಆಚರಿಸಲಾಗುತ್ತಿದೆ. ಆಧುನಿಕ ದಿನಗಳಲ್ಲಿ ವೈದ್ಯರ ಮೇಲಿನ ನಿರೀಕ್ಷೆಗಳು ಹೆಚ್ಚಾಗುತ್ತಿದೆ ಜೊತೆಗೆ ಅಂತರ್ಜಾಲದಲ್ಲಿರುವ ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು ವೈದ್ಯರನ್ನು ಪ್ರಶ್ನಿಸುವ ಮನೋಭಾವ ಬೆಳೆಯುತ್ತಿದೆ. ಅಂತರ್ಜಾಲದಲ್ಲಿ ವೈದ್ಯಕೀಯ ಮಾಹಿತಿ ಮಾತ್ರ ಇರುತ್ತದೆ. ರೋಗಿಯ ದೈಹಿಕ ಪರಿಸ್ಥಿತಿಗನುಗುಣವಾಗಿ ವೈದ್ಯರು ತಪಾಸಣೆ ನಡೆಸಿ ನೀಡುವ ಔಷಧಿಗೂ ಅಂತರ್ಜಾಲದಲ್ಲಿ ನೀಡಿರುವ ಮಾಹಿತಿಗೂ ಹೊಂದಾಣಿಕೆ ಬಾರದೆ ವೈದ್ಯರನ್ನು ದೂರುವುದು ಸರಿಯಲ್ಲ. ಕೊಲ್ಕತ್ತಾದಲ್ಲಿ ವೈದ್ಯರ ಮೇಲೆ ನಡೆದ ಹಲ್ಲೆಯಂತಹ ಘಟನೆ ನಡೆಯುತ್ತಿರುವುದು ವಿಷಾದನೀಯ. ಇದರಿಂದ ವೈದ್ಯವೃತ್ತಿಯೂ ಕವಲು ಹಾದಿಯಲ್ಲಿದೆ ಎಂದರು

ವೈದ್ಯರು ಇತರರಂತೆ ಮನುಷ್ಯರು ಎನ್ನುವುದನ್ನು ಮರೆಯಬಾರದು. ವೈದ್ಯರು ತಮ್ಮ ಕೌಶಲ್ಯದಿಂದ ರೋಗವನ್ನು ಗುಣಪಡಿಸಲು ಪ್ರಯತ್ನಿಸುತ್ತಾನೆ ಉಳಿದಂತೆ ಕೆಲವೊಮ್ಮೆ ರೋಗಿಯ ಸಾವು ಬದುಕು ಆತನ ಕೈಯಲ್ಲಿರುವುದಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ವೈದ್ಯರು ಮತ್ತು ರೋಗಿಗಳ ನಡುವಿನ ಉತ್ತಮ ಬಾಂಧವ್ಯ ಹದಗೆಡುತ್ತಿರುವ ಸಂದರ್ಭದಲ್ಲಿ ವೈದ್ಯರ ಸೇವೆಯನ್ನು ನೆನಪಿಸಿಕೊಳ್ಳುವ ನಿಟ್ಟಿನಲ್ಲಿ ವೈದ್ಯರ ದಿನ ಮಹತ್ವ ಪಡೆದಿದೆ ಎಂದು ವೈದ್ಯಾಧಿಕಾರಿ ಡಾ.ರಾಜೇಶ್ವರಿ ತಿಳಿಸಿದ್ದಾರೆ.

ಸಮಾರಂಭದಲ್ಲಿ ಜಿಲ್ಲಾ ಕುಟುಂಬ ಆರೋಗ್ಯಾಧಿಕಾರಿ ಡಾ.ಸಿಕಂದರ್ ಪಾಷಾ, ವೆನ್‌ಲಾಖ್‌ನ ವೈದ್ಯರಾದ ಡಾ.ರಶ್ಮೆ, ಜೊಯಾಲುಕ್ಕಾಸ್ ಫಳ್ನಿರ್‌ನ ಆಭರಣ ಮಳಿಗೆಯ ಶಾಖಾ ವ್ಯವಸ್ಥಾಪಕ ಹರೀಶ್, ಉಪ ವ್ಯವಸ್ಥಾಪಕ ವೀರೇಂದ್ರ ಉಪಸ್ಥಿತರಿದ್ದರು.

ಶ್ವೇತಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News