ಪ್ಯಾರಿಸ್ ಹವಾಮಾನ ಒಪ್ಪಂದ ರದ್ದುಪಡಿಸಲಾಗದು
Update: 2019-06-29 21:35 IST
ಒಸಾಕ, ಜೂ. 29: ಪ್ಯಾರಿಸ್ ಹವಾಮಾನ ಒಪ್ಪಂದವು ರದ್ದುಪಡಿಸಬಹುದಾದ ಒಪ್ಪಂದವಲ್ಲ ಎಂಬುದನ್ನು 20 ದೇಶಗಳ ಸಂಘಟನೆಯಾಗಿರುವ ಜಿ20ಯ 19 ದೇಶಗಳು ಶನಿವಾರ ದೃಢೀಕರಿಸಿವೆ ಹಾಗೂ ಅದನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಲು ಪಣತೊಟ್ಟಿವೆ.
ಅಮೆರಿಕ ಮಾತ್ರ ಈ ದೇಶಗಳಿಗೆ ವಿರುದ್ಧವಾದ ನೀತಿಯನ್ನು ಹೊಂದಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ 2015ರ ಈ ಜಾಗತಿಕ ಒಪ್ಪಂದಿಂದ ಈಗಾಗಲೇ ಹೊರಬಂದಿದೆ.
ಅರ್ಜೆಂಟೀನ, ಆಸ್ಟ್ರೇಲಿಯ, ಬ್ರೆಝಿಲ್, ಚೀನಾ, ಕೆನಡ, ಐರೋಪ್ಯ ಒಕ್ಕೂಟ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಶ್ಯ, ಇಟಲಿ, ಜಪಾನ್, ಮೆಕ್ಸಿಕೊ, ರಶ್ಯ, ಸೌದಿ ಅರೇಬಿಯ, ದಕ್ಷಿಣ ಆಪ್ರಿಕ, ದಕ್ಷಿಣ ಕೊರಿಯ, ಟರ್ಕಿ ಮತ್ತು ಬ್ರಿಟನ್ ದೇಶಗಳು ಎರಡು ದಿನಗಳ ಸಮಾಲೋಚನೆಯ ಬಳಿಕ ಈ ನಿರ್ಧಾರಕ್ಕೆ ಬಂದಿವೆ.
ಅಂತಿಮ ಹೇಳಿಕೆಯ ಭಾಷೆಯು ಕಳೆದ ವರ್ಷದ ಜಿ20 ಶೃಂಗ ಸಮ್ಮೇಳನದ ಹೇಳಿಕೆಯನ್ನೇ ಹೋಲುತ್ತದೆ. ಆದರೆ, ಅಮೆರಿಕದ ಆಕ್ಷೇಪಗಳ ಹಿನ್ನೆಲೆಯಲ್ಲಿ ಈ ಹೇಳಿಕೆಯು ಪ್ರಯಾಸದಿಂದ ಅನುಮೋದನೆಗೊಂಡಿದೆ.