×
Ad

ಭಾರತ-ಬ್ರಿಟನ್ ಬಾಂಧವ್ಯ ವೃದ್ಧಿ ಪ್ರಶಸ್ತಿ ಪ್ರದಾನ

Update: 2019-06-29 21:45 IST

ಲಂಡನ್, ಜೂ. 29: ಬ್ರಿಟನ್-ಭಾರತ ಬಾಂಧವ್ಯಕ್ಕಾಗಿ ನೀಡಿದ ದೇಣಿಗೆಗಳಿಗಾಗಿ ಹಿರಿಯ ಬ್ರಿಟಿಶ್ ಪತ್ರಕರ್ತ ಸರ್ ಮಾರ್ಕ್ ಟಲಿ ಅವರಿಗೆ ಶುಕ್ರವಾರ ಲಂಡನ್‌ನಲ್ಲಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಗಿದೆ.

ಬಿಬಿಸಿಯ ಹೊಸದಿಲ್ಲಿ ಮಾಜಿ ಬ್ಯೂರೋ ಮುಖ್ಯಸ್ಥರಾಗಿರುವ ಟಲಿ ಪ್ರಶಸ್ತಿ ಸ್ವೀಕರಿಸುವಾಗ ಸಭಿಕರು ಎದ್ದು ನಿಂತು ಚಪ್ಪಾಳೆ ತಟ್ಟಿದರು. ಭಾರತದಲ್ಲಿನ ವಾಸ್ತವ್ಯ ನನ್ನ ‘ಕರ್ಮ’ವಾಗಿತ್ತು ಎಂದು ಅವರು ಹೇಳಿದರು.

‘‘ನಾನು ಭಾರತಕ್ಕೆ ತುಂಬಾ ಋಣಿಯಾಗಿದ್ದೇನೆ. ನನ್ನ ನಿರೀಕ್ಷೆಗಿಂತಲೂ ಹೆಚ್ಚು ನಾನು ಪುರಸ್ಕೃತನಾಗಿದ್ದೇನೆ’’ ಎಂದು 83 ವರ್ಷದ ಟಲಿ ಹೇಳಿದರು.

ಅವರಿಗೆ ಈ ಹಿಂದೆ ರಾಣಿ ಎರಡನೇ ಎಲಿಝಬೆತ್ ‘ನೈಟ್’ ಪದವಿಯನ್ನು ನೀಡಿದ್ದಾರೆ. ಭಾರತದಲ್ಲಿ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಗಿದೆ.

ಭಾರತ-ಬ್ರಿಟನ್ ಸಂಬಂಧವನ್ನು ಬಲಪಡಿಸಲು ತಮ್ಮ ಜಾಗತಿಕ ಪ್ರಭಾವವನ್ನು ಬಳಸುವ ವ್ಯಕ್ತಿಗಳು ಮತ್ತು ಸಂಘಟನೆಗಳಿಗೆ ಪ್ರತಿ ವರ್ಷ ಬ್ರಿಟನ್-ಭಾರತ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

ಈ ಬಾರಿ ‘ಸಾಮಾಜಿಕ ಪರಿಣಾಮ’ ವಿಭಾಗದಲ್ಲಿ ಬ್ರಿಟಿಶ್ ಟೆಲಿಕಾಮ್ ಮತ್ತು ‘ವರ್ಷದ ಮಾರುಕಟ್ಟೆ ಪ್ರವೇಶಿಗ’ ವಿಭಾಗದಲ್ಲಿ ಭಾರತದ ಆತಿಥ್ಯ ಸ್ಟಾರ್ಟ್-ಅಪ್ ಓಯೊ ಪ್ರಶಸ್ತಿಗಳನ್ನು ಪಡೆದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News