ಸ್ಕ್ರಾಚ್ ಕಾರ್ಡ್ ಹೆಸರಿನಲ್ಲಿ ಮಹಿಳೆಗೆ ಲಕ್ಷಾಂತರ ರೂ. ವಂಚನೆ
ಉಡುಪಿ, ಜೂ.29: ಸ್ಕ್ರಾಚ್ ಕಾರ್ಡ್‌ನಲ್ಲಿ ಹಣ ವಿಜೇತರಾಗಿರುವುದಾಗಿ ನಂಬಿಸಿ ಮಹಿಳೆಯಿಂದ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೀಲಾವರ ಗ್ರಾಮದ ಕೆಮ್ಮಣ್ಣುಕಡು ನಿವಾಸಿ ಶ್ರೀಧರ್ ಎಂಬವರ ಪತ್ನಿ ಪಲ್ಲವಿ(29) ಎಂಬವರಿಗೆ ನ್ಯಾಪ್ಟೋಲ್ ಕಂಪೆನಿಯಿಂದ ಸ್ಕ್ರಾಚ್ ವಿನ್ ಎಂಬ ಕೂಪನ್ ಎ.25ರಂದು ಅಂಚೆ ಮೂಲಕ ಬಂದಿದ್ದು, ಕೂಪನ್‌ನಲ್ಲಿ 12 ಲಕ್ಷ ರೂ. ವಿಜೇತರಾಗಿರುವ ಬಗ್ಗೆ ತಿಳಿಸಲಾಗಿತ್ತು.
ಅದನ್ನು ನಂಬಿ ಪಲ್ಲವಿ ಅದರಲ್ಲಿ ನಮೂದಿಸಲಾದ ನ್ಯಾಪ್ಟೋಲ್ ಕಂಪೆನಿಯ ಅಶ್ವಿನ್ ಕುಮಾರ್ ಎಂಬವರ ಮೊಬೈಲ್ನ್ನು ಸಂಪರ್ಕಿಸಿದರು. ವಿಜೇತರಾದ 12 ಲಕ್ಷ ರೂ. ನೀಡಲು ಸರ್ವಿಸ್ ಶುಲ್ಕ, ಸರಕಾರಿ ಶುಲ್ಕ, ಜಿಎಸ್‌ಟಿ, ಸೆಂಟ್ರಲ್ ಟ್ಯಾಕ್ಸ್, ಸೆಕ್ಯೂರಿಟಿ ಡೆಪೋಸಿಟ್ ಮತ್ತು ಇತರ ಖರ್ಚುಗಳಿಗಾಗಿ ಒಟ್ಟು 3,55,800ರೂ.ವನ್ನು ಪಲ್ಲವಿ ಅವರಿಂದ ಇನ್ನೋರ್ವ ಆರೋಪಿ ಅಜಯ್ ಕುಮಾರ್ ಬೇರೆ ಬೇರೆ ಬ್ಯಾಂಕ್ ಖಾತೆಗೆ ಜಮಾ ಮಾಡಿಸಿಕೊಂಡಿದ್ದನು. ಬಳಿಕ ಆರೋಪಿಗಳು ವಿಜೇತವಾಗಿರುವ ಹಣ ಮತ್ತು ಕಟ್ಟಿದ ಹಣವನ್ನು ವಾಪಾಸು ನೀಡದೆ ನಂಬಿಸಿ, ಮೋಸ ಮಾಡಿರುವುದಾಗಿ ಪಲ್ಲವಿ ದೂರಿನಲ್ಲಿ ತಿಳಿಸಿದ್ದಾರೆ.