×
Ad

ಸರಕಾರಿ ಅಧಿಕಾರಿಗೆ ಬ್ಯಾಟ್‌ನಿಂದ ಹಲ್ಲೆ ನಡೆಸಿದ ಬಿಜೆಪಿ ಶಾಸಕನಿಗೆ ಜಾಮೀನು

Update: 2019-06-29 23:17 IST

ಇಂದೋರ್, ಜೂ.29: ಸರಕಾರಿ ಅಧಿಕಾರಿಯ ಮೇಲೆ ಬ್ಯಾಟ್‌ನಿಂದ ಹಲ್ಲೆ ನಡೆಸಿದ ಆರೋಪದಲ್ಲಿ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಇಂದೋರ್ ಶಾಸಕ ಆಕಾಶ್ ವಿಜಯವರ್ಗೀಯ ಅವರಿಗೆ ಭೋಪಾಲ್‌ನ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

 ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಅವರ ಮಗನಾಗಿರುವ ಶಾಸಕ ಆಕಾಶ್ ಬುಧವಾರ ಸರಕಾರಿ ಅಧಿಕಾರಿ ಧೀರೇಂದ್ರ ಸಿಂಗ್ ಬೈಸ್ ಅವರ ಮೇಲೆ ಕ್ರಿಕೆಟ್ ಬ್ಯಾಟ್‌ನಿಂದ ಹಲ್ಲೆ ನಡೆಸಿದ್ದರು. ಸರಕಾರಿ ಅಧಿಕಾರಿಗಳು ಇಂದೋರ್‌ನಲ್ಲಿ ಕುಸಿದು ಬೀಳುವ ಹಂತದಲ್ಲಿದ್ದ ಮನೆಯನ್ನು ತೆರವುಗೊಳಿಸಲು ಆಗಮಿಸಿದ ಸಂದರ್ಭ ಆಕಾಶ್ ಹೀಗೆ ದುಂಡಾವರ್ತನೆ ತೋರಿದ್ದರು. ಶಾಸಕರ ಜೊತೆ ಸೇರಿದ ಕೆಲವು ಸ್ಥಳೀಯರೂ ಅಧಿಕಾರಿಯ ಕಾಲರ್ ಹೊಡಿದು ಕೆನ್ನೆಗೆ ಹೊಡೆದಿದ್ದರು ಮತ್ತು ಓರ್ವ ಅಪರಿಚಿತ ವ್ಯಕ್ತಿ ಅಧಿಕಾರಿಯ ಅಂಗಿಯನ್ನು ಹರಿಯಲು ಪ್ರಯತ್ನಿಸಿದ್ದ.

 ಈ ಕುರಿತು ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಆಕಾಶ್, ಕಾಂಗ್ರೆಸ್‌ನ ಕೆಲವು ಶಾಸಕರು ನಗರ ಪಾಲಿಕೆಯ ಸಹಾಯದಿಂದ ಇಂದೋರ್‌ನಲ್ಲಿ ಕಟ್ಟಡಗಳನ್ನು ಧ್ವಂಸಗೊಳಿಸುತ್ತಿದ್ದಾರೆ ಎಂದು ತಿಳಿಸಿದ್ದರು. ಆಕಾಶ್ ಅವರನ್ನು ಪೊಲೀಸರು ಬುಧವಾರ ಬಂಧಿಸಿ ನ್ಯಾಯಿಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದರು. ನ್ಯಾಯಾಲಯ ಆಕಾಶ್‌ನ ಜಾಮೀನು ಅರ್ಜಿಯನ್ನು ತಳ್ಳಿಹಾಕಿತ್ತು ಮತ್ತು ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News