ಅಡಿಕೆ ಆಮದು ಸ್ಥಗಿತಕ್ಕೆ ಕೇಂದ್ರ ಸರಕಾರ ಭರವಸೆ: ಸಂಸದ ನಳಿನ್ ಕುಮಾರ್

Update: 2019-06-29 18:02 GMT

ಮಂಗಳೂರು, ಜೂ.29: ಕರಾವಳಿಯ ವಾಣಿಜ್ಯ ಬೆಳೆಯಾದ ಅಡಿಕೆಯ ಆಮದು ಸಂಪೂರ್ಣ ಸ್ಥಗಿತಗೊಳಿಸುವ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸರಕಾರ ಭರವಸೆ ನೀಡಿದೆ ಎಂದು ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ನಿರ್ಮಲಾ ಸೀತಾರಾಮನ್ ವಾಣಿಜ್ಯ ಸಚಿವರಾಗಿದ್ದಾಗ ಅಡಿಕೆ ಆಮದು ಮೇಲೆ ಹೆಚ್ಚುವರಿ ಸುಂಕ ವಿಧಿಸಲಾಗಿತ್ತು. ಆದರೆ ಮತ್ತೆ ವಿದೇಶದಿಂದ ಅಡಿಕೆ ಕಳ್ಳದಾರಿಯಲ್ಲಿ ಭಾರತಕ್ಕೆ ಆಮದಾಗುತ್ತಿದೆ. ಈ ಬಗ್ಗೆ ಇತ್ತೀಚೆಗೆ ದೆಹಲಿಗೆ ತೆರಳಿದ ಕ್ಯಾಂಪ್ಕೋ ನಿಯೋಗದಲ್ಲಿ ನಾನು, ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಮೈಸೂರಿನ ಸಂಸದ ಪ್ರತಾಪ್‌ಸಿಂಹ ಭಾಗವಹಿಸಿದ್ದೆವು. ಅಡಿಕೆ ಕಳ್ಳತನವನ್ನು ಸಂಪೂರ್ಣ ತಡೆಗಟ್ಟಲು ವಾಣಿಜ್ಯ ಸಚಿವಾಲಯ ಹಾಗೂ ಗೃಹ ಇಲಾಖೆಗೂ ಮನವರಿಕೆ ಮಾಡಲಾಗಿದೆ. ಈ ಬಗ್ಗೆ ಅಧ್ಯಯನ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ಕೇಂದ್ರ ಸಚಿವರಿಂದ ಲಭಿಸಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.

ಮಂಗಳೂರು ವಿಭಾಗ ರಚನೆ: ಮಂಗಳೂರನ್ನು ಪ್ರತ್ಯೇಕ ರೈಲ್ವೆ ವಲಯ ರಚಿಸುವ ಬಗ್ಗೆ ಕೇಂದ್ರ ರೈಲ್ವೆ ಇಲಾಖೆಗೆ ಮನವಿ ಸಲ್ಲಿಸಿಲ್ಲ. ಆದರೆ ಕೇರಳ ಸಂಸದರೊಬ್ಬರು ಈ ಬಗ್ಗೆ ರಾಜ್ಯಸಭೆಯಲ್ಲಿ ಪ್ರಶ್ನೆ ಕೇಳಿರುವುದು ಗಮನಕ್ಕೆ ಬಂದಿದೆ. ದಕ್ಷಿಣ ರೈಲ್ವೆ, ನೈಋತ್ಯ ರೈಲ್ವೆ ಹಾಗೂ ಕೊಂಕಣ ರೈಲ್ವೆ ಈ ಮೂರು ವಲಯಗಳನ್ನು ಮಂಗಳೂರು ರೈಲ್ವೆ ಒಳಗೊಂಡಿದೆ. ಹಾಗಾಗಿ ಇಡೀ ರೈಲ್ವೆ ವ್ಯವಸ್ಥೆಯನ್ನು ವಲಯ ರಚನೆಗೆ ಮಾರ್ಪಾಟುಗೊಳಿಸಬೇಕಾದ ಕಾರಣ ಇದು ಸುಲಭವಲ್ಲ ಎಂಬ ಕಾರಣಕ್ಕೆ ವಲಯ ರಚನೆಯ ಪ್ರಸ್ತಾಪವನ್ನು ಕೈಬಿಡಲಾಗಿತ್ತು. ಅದರ ಬದಲು ಮಂಗಳೂರು ರೈಲ್ವೆ ವಿಭಾಗ ರಚಿಸುವ ಬಗ್ಗೆ ರೈಲ್ವೆ ಸಚಿವರಲ್ಲಿ ಪ್ರಸ್ತಾಪಿಸಲಾಗಿದೆ ಎಂದರು.

ಮದ್ರಾಸ್ ವಲಯದಿಂದ ರೈಲ್ವೆ ವಿಭಾಗ ರಚಿಸುವುದರಿಂದ ಮಂಗಳೂರಿನಲ್ಲಿ ರೈಲ್ವೆ ಅಭಿವೃದ್ಧಿಗೆ ಸುಲಭವಾಗುತ್ತದೆ. ಇದಕ್ಕೆ ರೈಲ್ವೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅಲ್ಲದೆ ಬಜೆಟ್ ಅಧಿವೇಶನ ಬಳಿಕ ಈ ಬಗ್ಗೆ ಸಭೆ ನಡೆಸಿ ಚರ್ಚೆ ನಡೆಸುವುದಾಗಿ ಭರವಸೆ ನೀಡಿದ್ದಾರೆ ಎಂದು ಸಂಸದ ನಳಿನ್‌ಕುಮಾರ್ ಕಟೀಲ್ ಹೇಳಿದರು.

ಹೆದ್ದಾರಿ ಯೋಜನೆ ತ್ವರಿತಕ್ಕೆ ಗಡ್ಕರಿ ಸಭೆ: ದ.ಕ.ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಶೀಘ್ರವೇ ದೆಹಲಿಯಲ್ಲಿ ಅಧಿಕಾರಿಗಳ ಸಭೆ ನಡೆಸುವುದಾಗಿ ತಿಳಿಸಿದ್ದಾರೆ. ಕುಲಶೇಖರ-ಕಾರ್ಕಳ ಹೆದ್ದಾರಿ ಕಾಮಗಾರಿಗೆ ಟೆಂಡರ್ ಆಗಿದ್ದು, ಭೂಸ್ವಾಧೀನ ಪ್ರಕ್ರಿಯೆ ಬಾಕಿ ಉಳಿದಿದೆ ಎಂದರು.

ಭಾರತ್‌ಮಾಲಾ ಯೋಜನೆಯಲ್ಲಿ ಪ್ರಥಮ ಹಂತದ ಮೂಲ್ಕಿ-ಕಟೀಲ್-ಮೇಲ್ಕಾರ್ ಬೈಪಾಸ್ ರಚನೆ, ಬಿ.ಸಿ.ರೋಡ್‌ನ ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗೆ ಹೆದ್ದಾರಿ ಕಾಮಗಾರಿ, ಬಿ.ಸಿ.ರೋಡ್-ಅಡ್ಡಹೊಳೆ ನಾಲ್ಕು ಪಥದ ಕಾಂಕ್ರಿಟ್ ಕಾಮಗಾರಿಗೆ ವೇಗ ನೀಡಲು ಹಾಗೂ ಮೈಸೂರಿನಿಂದ ಮಡಿಕೇರಿ ಹಾಗೂ ಮಡಿಕೇರಿಯಿಂದ ಮಾಣಿ ವರೆಗೆ ಹೆದ್ದಾರಿ ವಿಸ್ತರಣೆ ಕಾಮಗಾರಿ ಕುರಿತಂತೆ ಸಚಿವ ನಿತಿನ್ ಗಡ್ಕರಿ ಶೀಘ್ರದಲ್ಲಿಯೇ ಅಧಿಕಾರಿಗಳ ಸಭೆ ನಡೆಸಲಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಶಾಸಕ ವೇದವ್ಯಾಸ ಕಾಮತ್, ಮುಖಂಡರಾದ ಸುದರ್ಶನ ಮೂಡುಬಿದಿರೆ, ಕಿಶೋರ್ ರೈ, ಕ್ಯಾ.ಬ್ರಿಜೇಶ್ ಚೌಟ, ಸಂದೇಶ್ ಶೆಟ್ಟಿ, ವಿನಯ ಎಲ್.ಶೆಟ್ಟಿ, ದಿನೇಶ್ ಪಾಂಡೇಶ್ವರ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News