ರಾಷ್ಟ್ರಮಟ್ಟದ ಹಿಂದಿ ನಾಟಕ ಸ್ಪರ್ಧೆಯಲ್ಲಿ ನವಸುಮ ತಂಡಕ್ಕೆ ಪ್ರಶಸ್ತಿ
ಉಡುಪಿ, ಜೂ.29: ಹಿಮಾಚಲ ಪ್ರದೇಶದ ಶಿಮ್ಲಾದ ಗಯ್ಟಿ ಥಿಯೇಟರ್ ನಲ್ಲಿ ನಡೆದ 64ನೇ ರಾಷ್ಟ್ರಮಟ್ಟದ ನಾಟಕ ಸ್ಪರ್ಧೆಯಲ್ಲಿ ನವಸುಮ ರಂಗಮಂಚ ಕೊಡವೂರು ತಂಡ ಪ್ರದರ್ಶಿಸಿದ ‘ಅಂಜಲಿ ಭರ್ ಪಾನೀ’ ಹಿಂದಿ ನಾಟಕ ಪ್ರಥಮ ಪ್ರಶಸ್ತಿ ಗೆದ್ದುಕೊಂಡಿದೆ.
ಈ ಮೂಲಕ ನವಸುಮ ರಾಷ್ಟ್ರಮಟ್ಟದ ಹಿಂದಿ ಭಾಷೆಯ ನಾಟಕ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದುಕೊಂಡ ಕರ್ನಾಟಕದ ಮೊದಲ ತಂಡ ಎಂಬ ಪ್ರಶಂಸೆಗೆ ಪಾತ್ರವಾಗಿದೆ ಎಂದು ನವಸುಮ ಅಧ್ಯಕ್ಷ ಬಾಲಕೃಷ್ಣ ಕೊಡವೂರುಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಎಎಐಎ ಸಂಸ್ಥೆಯು ಕಳೆದ 64 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ರಾಷ್ಟ್ರಮಟ್ಟದ ನಾಟಕ ಸ್ಪರ್ಧೆಯಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕದ ನವಸುಮ ರಂಗಮಂಚ ತಂಡಕ್ಕೆ ಅವಕಾಶ ದೊರೆತಿದೆ. ಈ ಸ್ಪರ್ಧೆಯಲ್ಲಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಒಟ್ಟು 34 ನಾಟಕ ತಂಡಗಳು ಭಾಗವಹಿಸಿದ್ದವು.
ಸ್ಪರ್ಧೆಯಲ್ಲಿ ನವಸುಮ ರಂಗಮಂಚ ತಂಡವು ಅತ್ಯುತ್ತಮ ನಾಟಕ ಪ್ರಶಸ್ತಿ ಸೇರಿದಂತೆ ಎಂಟು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಉತ್ತಮ ನಟ ಮತ್ತು ನಿರ್ದೇಶನ ಬಾಲಕೃಷ್ಣ ಕೊಡವೂರು, ಉತ್ತಮ ಬೆಳಕು ಮತ್ತು ರಂಗಸಜ್ಜಿಕೆ ಜಯಶೇಖರ್ ಮಡಪ್ಪಾಡಿ, ಉತ್ತಮ ರಂಗವಿನ್ಯಾಸ ಮತ್ತು ಪ್ರಸಾಧನ ವಿನೋದ್ ಕೊಡವೂರು ಹಾಗೂ ಸುಶಾಂತ್, ವೈಶಾಖ್ ಮತ್ತು ಚಂದ್ರಾವತಿ ಮೆಚ್ಚುಗೆಯ ನಟ ಪ್ರಶಸ್ತಿ ಪಡೆದುಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ವಿನೋದ್ ಕಾಂಚನ್, ಉಪಾಧ್ಯಕ್ಷ ದಿನೇಶ್ ಅಮೀನ್, ಸಲಹೆಗಾರ ಸುರೇಶ್ ಶೆಟ್ಟಿ, ಹಿರಿಯ ನಟ ಹರಿಪ್ರಸಾದ್, ಜಗದೀಶ್ ಶೆಟ್ಟಿ, ಫಾರೂಕ್ ಅಹಮ್ಮದ್ ಉಪಸ್ಥಿತರಿದ್ದರು.