ಕೊಲಂಬಿಯಾ ಕೆಡವಿದ ಚಿಲಿ ಸೆಮಿ ಫೈನಲ್‌ಗೆ ಲಗ್ಗೆ
ಸಾವೊಪೌಲೊ, ಜೂ.29: ಕೊಲಂಬಿಯಾ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 5-4 ಅಂತರದಿಂದ ಮಣಿಸಿದ ಚಾಂಪಿಯನ್ ಚಿಲಿ ಸತತ ಮೂರನೇ ಬಾರಿ ಕೊಪಾ ಅಮೆರಿಕ ಫುಟ್ಬಾಲ್ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ತಲುಪಿದೆ.
ಚಿಲಿ ನಿಗದಿತ ಸಮಯದಲ್ಲಿ ಪಂದ್ಯವನ್ನು ಗೆಲ್ಲಬೇಕಾಗಿತ್ತು. ಆದರೆ, ಎರಡು ಗೋಲುಗಳನ್ನು ವೀಡಿಯೊ ಪುನರ್‌ಪರಿಶೀಲನೆ ವೇಳೆ ತಿರಸ್ಕರಿಸಿಲ್ಪಟ್ಟ ಕಾರಣ ಪಂದ್ಯ ಗೋಲುರಹಿತ ಡ್ರಾಗೊಂಡಿತು.
ಶುಕ್ರವಾರ ರಾತ್ರಿ ನಡೆದ ಹಣಾಹಣಿಯಲ್ಲಿ ಅಲೆಕ್ಸ್ ಸ್ಯಾಂಚೆಝ್ ಗೆಲುವಿನ ಸ್ಪಾಟ್-ಕಿಕ್‌ಬಾರಿಸಿದರು. ಚಿಲಿ ಬುಧವಾರ ನಡೆಯಲಿರುವ ಸೆಮಿ ಫೈನಲ್‌ನಲ್ಲಿ ಉರುಗ್ವೆ ಅಥವಾ ಪೆರು ತಂಡವನ್ನು ಎದುರಿಸಲಿದೆ. ಮತ್ತೊಂದು ಸೆಮಿ ಫೈನಲ್‌ನಲ್ಲಿ ಆತಿಥೇಯ ಬ್ರೆಝಿಲ್ ಹಾಗೂ ಅರ್ಜೆಂಟೀನ ಮುಖಾಮುಖಿಯಾಗಲಿವೆ.
‘ನಾವು ಎರಡು ಗೋಲುಗಳನ್ನು ಹೊಡೆದರೂ ದುರದೃಷ್ಟವಶಾತ್ ವಿಎಆರ್‌ನಲ್ಲಿ ಇದು ರದ್ದುಗೊಂಡಿತು. ನಿಗದಿತ ಸಮಯದಲ್ಲಿ ಗೆಲ್ಲುವುದಕ್ಕೆ ನಾವು ಅರ್ಹರಿದ್ದೆವು. ಆದರೆ, ನಮಗೆ ಐದು ಪೆನಾಲ್ಟಿಗಳನ್ನು ಗೋಲಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ’’ ಎಂದು ವಿಡಾಲ್ ಹೇಳಿದರು.