ವಿಶೇಷ ಒಲಿಂಪಿಕ್ಸ್ ಚಾಂಪಿಯನ್ ರಾಜ್‌ಕುಮಾರ್‌ಗೆ ಹಣಕಾಸು ಸಮಸ್ಯೆ
ಹೊಸದಿಲ್ಲಿ, ಜೂ.29: ವಿಶೇಷ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಜಯಿಸಿರುವ ರಾಜ್‌ಕುಮಾರ್ ತಿವಾರಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಬೆಳಗ್ಗೆ ಹಾಗೂ ಸಂಜೆ ದಿನಪತ್ರಿಕೆಯನ್ನು ಮಾರಾಟ ಮಾಡುತ್ತಾರೆ. ಕ್ಯಾಲಿಫೋರ್ನಿಯದ ಸ್ಯಾನ್‌ಜೋಸ್‌ನಲ್ಲಿ ಸ್ಕೇಟಿಂಗ್‌ನಲ್ಲಿ ಸರ್ಟಿಫಿಕೇಶನ್ ಕೋರ್ಸ್ ಪಡೆಯಲು ಅಮೆರಿಕದಲ್ಲಿರುವ ಭಾರತೀಯ ರೆಸ್ಟೊರೆಂಟ್‌ನಲ್ಲಿ ತಿಂಗಳ ಕಾಲ ಪಾತ್ರೆ ತೊಳೆಯುವ ಕೆಲಸವನ್ನೂ ಮಾಡಿದ್ದರು.
ರಾಜ್‌ಕುಮಾರ್ 2013ರಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದ ವಿಶೇಷ ಒಲಿಂಪಿಕ್ಸ್ ವಿಶ್ವ ವಿಂಟರ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ಭಾರತದ ಏಕೈಕ ಐಸ್‌ಸ್ಕೇಟರ್ ಎನಿಸಿಕೊಂಡಿದ್ದರು. ಪಹಾರ್‌ಗಂಜ್‌ನ ಮುಲ್ತಾನಿ ಧಾಂಡದ ದಿನಪತ್ರಿಕೆಯ ಮಾರಾಟಗಾರನ ಪುತ್ರ ರಾಜ್‌ಕುಮಾರ್ 2014ರಿಂದ ಥೆರಪಿ ಸೆಶನ್ ಸಹಿತ ಹಲವು ಚಿಕಿತ್ಸೆ ಪಡೆದ ಬಳಿಕ ಅಂತರ್‌ರಾಷ್ಟ್ರೀಯ ಸ್ಪರ್ಧಾ ಕೂಟದಲ್ಲಿ ಸಾಮಾನ್ಯ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ.
ಹಣಕಾಸು ಸಮಸ್ಯೆಯಿಂದಾಗಿ ಈ ವರ್ಷ ಆಸ್ಟ್ರೀಯ ಹಾಗೂ ಟರ್ಕಿಯಲ್ಲಿ ನಡೆದ ಟೂರ್ನಿಯಲ್ಲಿ ಭಾಗವಹಿಸುವಿಕೆಯಿಂದ ವಂಚಿತರಾಗಿರುವ ರಾಜಕುಮಾರ್ ಎರಡು ಪ್ರಮುಖ ರ್ಯಾಂಕಿಂಗ್ ಪಾಯಿಂಟ್ ಕಳೆದುಕೊಂಡಿದ್ದಾರೆ.ಚೀನಾ, ಕೆನಡಾ, ಕ್ರೊಯೇಶಿಯ, ಜರ್ಮನಿ ಹಾಗೂ ಅಮೆರಿಕದಲ್ಲಿ ನಡೆಯುವ ಮುಂದಿನ ಐದು ಚಾಂಪಿಯನ್‌ಶಿಪ್‌ನಿಂದ ತಿವಾರಿ ಭಾಗವಹಿಸುತ್ತಿಲ್ಲ. ಈ ಟೂರ್ನಿಯಲ್ಲಿ ಭಾಗವಹಿಸಲು 16ರಿಂದ 18 ಲಕ್ಷ ರೂ.ಅಗತ್ಯವಿದೆ.