×
Ad

ವಿಶ್ವಕಪ್ ಕ್ರಿಕೆಟ್: ನ್ಯೂಝಿಲೆಂಡ್ ವಿರುದ್ಧ ಆಸಿಸ್ ಗೆ ಭರ್ಜರಿ ಜಯ

Update: 2019-06-30 09:04 IST

ಲಂಡನ್, ಜೂ.30: ಟ್ರೆಂಟ್ ಬೋಲ್ಟ್ ಅವರ ಹ್ಯಾಟ್ರಿಕ್ ಸಾಧನೆಯ ನಡುವೆಯೂ ಆಸ್ಟ್ರೇಲಿಯಾ ತಂಡ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ನ್ಯೂಝಿಲೆಂಡ್ ವಿರುದ್ಧ 86 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ನಡೆದ ಈ ಪಂದ್ಯ 2015ರ ವಿಶ್ವಕಪ್‌ನ ಫೈನಲ್ ಪಂದ್ಯವನ್ನು ನೆನಪಿಸಿತು.

ಉಸ್ಮಾಸ್ ಖ್ವಾಜಾ, ಮಿಚೆಲ್ ಸ್ಟಾರ್ಕ್ ಹಾಗೂ ಜಾನ್ಸನ್ ಬೆಹ್ರಂಡ್ರೋಫ್ ಅವರನ್ನು ಸತತ ಮೂರು ಎಸೆತಗಳಲ್ಲಿ ಬೋಲ್ಟ್ ಬಲಿ ಪಡೆದರು. ಒಂದು ಹಂತದಲ್ಲಿ 22 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 92 ರನ್ ಗಳಿಸಿದ ಆಸ್ಟ್ರೇಲಿಯಾ ತಂಡ ಆತಂಕಕ್ಕೆ ಸಿಲುಕಿತ್ತು. ಆದರೂ ಅಂತಿಮವಾಗಿ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 243 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು.

ಬೆಹ್ರಂಡ್ರೋಫ್ ಆರಂಭದಲ್ಲೇ ನ್ಯೂಝಿಲೆಂಡ್‌ಗೆ ಆಘಾತ ನೀಡಿದರೆ, ಸ್ಟಾರ್ಕ್ 26 ರನ್‌ಗಳಿಗೆ 5 ವಿಕೆಟ್ ಕಬಳಿಸಿ ಎದುರಾಳಿಗಳನ್ನು ಕೇವಲ 157 ರನ್‌ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. 44ನೇ ಓವರ್‌ನಲ್ಲೇ ಇನಿಂಗ್ಸ್ ಮುಗಿಸಿದ ನ್ಯೂಝಿಲೆಂಡ್‌ನ ಯವ ಆಟಗಾರರೂ ಅರ್ಧಶತಕ ಗಳಿಸಲೂ ಸಾಧ್ಯವಾಗಲಿಲ್ಲ.

ಈಗಾಗಲೇ ಸೆಮಿಫೈನಲ್ ತಲುಪಿರುವ ಆಸ್ಟ್ರೇಲಿಯಾ ಎಂಟು ಪಂದ್ಯಗಳಿಂದ 14 ಅಂಕ ಪಡೆದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆರು ಪಂದ್ಯಗಳಿಂದ 11 ಅಂಕ ಸಂಪಾದಿಸಿ ಭಾರತಕ್ಕಿಂತ ಮೂರು ಅಂಕ ಮುಂದಿದೆ. ನ್ಯೂಝಿಲೆಂಡ್ ಎಂಟು ಪಂದ್ಯಗಳಿಂದ 11 ಅಂಕ ಗಳಿಸಿ ಮೂರನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನ ಒಂಬತ್ತು ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

ಬೆಹ್ರಂಡ್ರೋಫ್ ನ್ಯೂಝಿಲೆಂಡ್‌ನ ಆರಂಭಿಕ ಆಟಗಾರರಾದ ಹೆನ್ರಿ ನಿಕೋಲ್ಸ್ ಮತ್ತು ಮಾರ್ಟಿನ್ ಗುಪ್ಟಿಲ್ ಅವರನ್ನು ಅಗ್ಗದ ಮೊತ್ತಕ್ಕೆ ಔಟ್ ಮಾಡಿದರು. ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ವಿಲಿಯಮ್ಸನ್ ಹಾಗೂ ರಾಸ್ ಟೇಲರ್ ನಿಧಾನವಾಗಿ ಇನಿಂಗ್ಸ್ ಕಟ್ಟುವ ಪ್ರಯತ್ನ ನಡೆಸಿದರೂ, ಡ್ಯಾಬ್‌ಶಾಟ್ ಹೊಡೆಯುವ ಪ್ರಯತ್ನದಲ್ಲಿ 40 ರನ್‌ಗಳಿಗೆ ನ್ಯೂಝಿಲೆಂಡ್ ನಾಯಕ ಔಟ್ ಆದರು. ಕೆಳಕ್ರಮಾಂಕವನ್ನು ಮುರಿದ ಸ್ಟಾರ್ಕ್, ಈ ಟೂರ್ನಿಯಲ್ಲಿ 24 ವಿಕೆಟ್ ಕಬಳಿಸಿದ ಹೆಗ್ಗಳಿಕೆಗೆ ಪಾತ್ರರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News