ಮೋದಿ "ಮನ್ ಕೀ ಬಾತ್" 2ನೇ ಇನಿಂಗ್ಸ್ ಇಂದು ಆರಂಭ
ಹೊಸದಿಲ್ಲಿ, ಜೂ.30: ನರೇಂದ್ರ ಮೋದಿ ಎರಡನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡು ಒಂದು ತಿಂಗಳ ಬಳಿಕ ರೇಡಿಯೊ ಕಾರ್ಯಕ್ರಮ "ಮನ್ ಕೀ ಬಾತ್" ಇಂದು ಮತ್ತೆ ಆರಂಭವಾಗಲಿದೆ. ಇದು ಮೋದಿಯವರ ಎರಡನೇ ಇನಿಂಗ್ಸ್‌ನ ಮೊದಲ ಕಾರ್ಯಕ್ರಮವಾಗಿದೆ. ಇಂದು ಪೂರ್ವಾಹ್ನ 11 ಗಂಟೆಗೆ ಆಕಾಶವಾಣಿಯಲ್ಲಿ ಪ್ರಸಾರವಾಗಲಿದೆ.
ಕೇಂದ್ರ ಗೃಹಸಚಿವ ಅಮಿತ್ ಶಾ ಈ ರೇಡಿಯೊ ಕಾರ್ಯಕ್ರಮವನ್ನು ಪಕ್ಷದ ಇತರ ಕಾರ್ಯಕರ್ತರ ಜತೆ ಸೇರಿ ದಿಲ್ಲಿಯ ದ್ವಾರಕಾದಲ್ಲಿರುವ ಕಕ್ರೋಲಾ ಕ್ರೀಡಾಂಗಣದಲ್ಲಿ ಆಲಿಸಲಿದ್ದಾರೆ. ಎರಡನೇ ಬಾರಿ ಅದ್ಭುತ ಜಯದೊಂದಿಗೆ ಅಧಿಕಾರದ ಸೂತ್ರ ಹಿಡಿದಿರುವ ಬಿಜೆಪಿ, ಈ ಬಾರಿ ಈ ಜನಪ್ರಿಯ ಕಾರ್ಯಕ್ರಮವನ್ನು ಮತ್ತಷ್ಟು ಜನರ ಬಳಿಗೆ ಒಯ್ಯಲು ನಿರ್ಧರಿಸಿದೆ.
ಕಾರ್ಯಕ್ರಮಕ್ಕೆ ಹೆಚ್ಚು ಹೆಚ್ಚು ಜನರನ್ನು ಆಕರ್ಷಿಸುವ ಸಲುವಾಗಿ ಉತ್ತಮ ರೇಡಿಯೊ ಸೆಟ್ ಸೇರಿದಂತೆ ಉತ್ತಮ ಸೌಲಭ್ಯಗಳನ್ನು ಕಲ್ಪಿಸುವಂತೆ ಪಕ್ಷದ ಎಲ್ಲ ಹಂತದ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ.
ಪ್ರಧಾನಿ ಮೋದಿಯವರು ಕಳೆದ ಫೆಬ್ರವರಿಯಲ್ಲಿ ಈ ಸರಣಿಯ ಕೊನೆಯ ಕಂತಿನಲ್ಲಿ ಮಾತನಾಡಿದ್ದರು. ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಮರಳುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದರು.