ದಾಖಲೆ ಸೃಷ್ಟಿಸಿದ ಮುಂಬೈ ಮಹಾ ಮಳೆ
ಮುಂಬೈ, ಜೂ.30: ಮಹಾರಾಷ್ಟ್ರದಲ್ಲಿ ಈ ಬಾರಿ ಮುಂಗಾರು ವಿಳಂಬವಾಗಿ ಆರಂಭವಾದರೂ ಕಳೆದೆರಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ ದಾಖಲೆ ಪ್ರಮಾಣದ ಅಂದರೆ 234.8 ಮಿಲಿಮೀಟರ್ ಮಳೆಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಜೂನ್ ತಿಂಗಳಲ್ಲಿ ಆಗುವ ವಾಡಿಕೆ ಮಳೆಯ ಶೇಕಡ 97ರಷ್ಟು ಮಳೆ ಎರಡನೇ ದಿನದಲ್ಲಿ ಬಿದ್ದಂತಾಗಿದೆ.
2015ರ ಬಳಿಕ ಇದೇ ಮೊದಲ ಬಾರಿಗೆ ಒಂದು ದಿನದಲ್ಲಿ ಗರಿಷ್ಠ ಮಳೆ (234.8 ಮಿ.ಮೀ) ಬಿದ್ದಿದೆ. ಕಳೆದ ಒಂದು ದಶಕದಲ್ಲಿ ದಾಖಲಾದ ಎರಡನೇ ಗರಿಷ್ಠ ಮಳೆಯ ಪ್ರಮಾಣ ಕೂಡಾ ಇದಾಗಿದೆ. ಮುಂಬೈನ ಪೂರ್ವ ಹಾಗೂ ಪಶ್ಚಿಮ ಉಪನಗರಗಳಲ್ಲಿ ಕಳೆದ 24 ಗಂಟೆಗಳಲ್ಲಿ 200 ಮಿಲಿಮೀಟರ್‌ಗಿಂತ ಅಧಿಕ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಪ್ರಕಟಿಸಿದೆ.
ಥಾಣೆ (237.5 ಮಿಲಿಮೀಟರ್) ಮತ್ತು ನವಿ ಮುಂಬೈ (245.2 ಮಿಲಿಮೀಟರ್) ಪ್ರದೇಶದಲ್ಲೂ ಭಾರಿ ಮಳೆಯಾಗಿದೆ. ಕೆಲ ಜಲಾನಯನ ಪ್ರದೇಶಗಳಲ್ಲೂ ವ್ಯಾಪಕ ಮಳೆಯಾಗುತ್ತಿದ್ದು, ಮುಂಬೈಗೆ ನೀರು ಸರಬರಾಜು ಮೂಲವಾದ ವಿಹಾರ್ (376 ಮಿ.ಮೀ), ಮೊರ್ಹಬ್ (300.2) ಹಾಗೂ ತುಳಸಿ (293) ಪ್ರದೇಶದಲ್ಲಿ ಉತ್ತಮ ಮಳೆಯಾಗಿದೆ.
ಮುಂಬೈ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಹಲವೆಡೆ ಮರಗಳು ಮುರಿದು ಬಿದ್ದಿವೆ. ಇದರಿಂದಾಗಿ ಸಂಭವಿಸಿದ ಎರಡು ಅವಘಡಗಳಲ್ಲಿ ಇಬ್ಬರು ಜೀವ ಕಳೆದುಕೊಂಡಿದ್ದಾರೆ. ಮೊರಲ್ ಮತ್ತು ಘಟ್ಕೋಪಾರ್ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ.