ಬಜಾಲ್‌ನಲ್ಲಿ ರಕ್ತದಾನ ಶಿಬಿರ
ಮಂಗಳೂರು, ಜೂ.30:ಡಿವೈಎಫ್‌ಐ ಮುಖಂಡರಾಗಿದ್ದ ಶ್ರೀನಿವಾಸ್ ಬಜಾಲ್ರ 17ನೇ ಹುತಾತ್ಮ ದಿನದ ಅಂಗವಾಗಿ ಡಿವೈಎಫ್‌ಐ ಬಜಾಲ್ ಘಟಕದ ವತಿಯಿಂದ ರವಿವಾರ ಬಜಾಲ್ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ಎಸೆಸ್ಸೆಲ್ಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ರಕ್ತದಾನ ಶಿಬಿರ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಂತ ಜೋಸೆಫರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಸುನಿತಾ ಸೆರಾವೋ ರಕ್ತದಾನ ಅತ್ಯಂತ ಮಹತ್ವದ್ದಾಗಿದ್ದು ಇಲ್ಲಿನ ಡಿವೈಎಫ್‌ಐ ಘಟಕ ಇಂತಹ ಒಂದು ಉತ್ತಮ ಕೆಲಸವನ್ನು ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.
ಡಿವೈಎಫ್‌ಐ ಮುಖಂಡ ಅಶ್ರಫ್ ಕೆಸಿ ರೋಡ್ ಮಾತನಾಡಿ ಹುತಾತ್ಮ ಶ್ರೀನಿವಾಸ್ ಬಜಾಲ್ ಸೌಹಾರ್ದ ಸಮಾಜ ಕಟ್ಟುವ ಕನಸಿನೊಂದಿಗೆ ಜಿಲ್ಲೆಯ ಯುವಜನ ಚಳುವಳಿಯಲ್ಲಿ ಸಕ್ರಿಯರಾಗಿದ್ದರು. ಅವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಡಿವೈಎಫ್‌ಐ ನಿರತವಾಗಿದೆ ಎಂದರು.
ಈ ಸಂದರ್ಭ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅಧಿಕ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಶ್ರೀನಿವಾಸ್ ಬಜಾಲ್ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪಕ್ಕಲಡ್ಕ ಡಿವೈಎಫ್‌ಐ ಅಧ್ಯಕ್ಷ ವರಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಸಾಮಾಜಿಕ ಮುಖಂಡರಾದ ಸಜಿತ್ ಶೆಟ್ಟಿ, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಕಾರ್ಮಿಕ ಮುಖಂಡ ಸುರೇಶ್ ಬಜಾಲ್, ಜನತಾ ವ್ಯಾಯಾಮ ಶಾಲೆಯ ಕಾರ್ಯದರ್ಶಿ ದೀಪಕ್ ಬಜಾಲ್, ಪಕ್ಕಲಡ್ಕ ಯುವಕ ಮಂಡಲದ ಕಾರ್ಯದರ್ಶಿ ನಾಗರಾಜ್ ಬಜಾಲ್ ಉಪಸ್ಥಿತರಿದ್ದರು.
ಪ್ರಕಾಶ್ ಶೆಟ್ಟಿ ಸ್ವಾಗತಿಸಿದರು. ಸಂಜಯ್ ಕುಲಾಲ್ ವಂದಿಸಿದರು. ದೀರಜ್ ಪಕ್ಕಲಡ್ಕ ಕಾರ್ಯಕ್ರಮ ನಿರೂಪಿಸಿದರು.