'ಮಾದಕ ವ್ಯಸನದಿಂದ ದೂರವಿದ್ದಾಗ ಸ್ವಸ್ಥ ಸಮಾಜ ನಿರ್ಮಾಣ'

Update: 2019-06-30 15:15 GMT

ಪಡುಬಿದ್ರಿ: ಯುವಕರು ಮಾದಕ ವ್ಯಸನಕ್ಕೆ ಬಲಿಯಾಗುತ್ತಿದ್ದು, ಯುವಪಡೆ ದುಶ್ಚಟದಿಂದ ದೂರವಿದ್ದಾಗ ಸ್ವಸ್ಥ ಸಮಾಜ ನಿರ್ಮಾಣನ ಸಾಧ್ಯ ಎಂದು  ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಕಾಂತ ಪಡುಬಿದ್ರಿ ಅಭಿಪ್ರಾಯಪಟ್ಟರು.

ಹೆಜಮಾಡಿ ಕರಾವಳಿ ಯುವಕ-ಯುವತಿ ವೃಂದ, ನೆಹರೂ ಯುವ ಕೇಂದ್ರ ಉಡುಪಿ, ದೊಡ್ಡಣಗುಡ್ಡೆ ಡಾ.ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ಸಂಯುಕ್ತವಾಗಿ ಹೆಜಮಾಡಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವ ಮಾದಕ ವ್ಯಸನ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕರಾವಳಿ ಕಡಲ ತೀರದಲ್ಲಿ ಗುಂಪಾಗಿ ದುಶ್ಚಟಗಳಲ್ಲಿ ತೊಡಗುತ್ತಿರುವ ದೃಶ್ಯ ಕಂಡು ಬರುತ್ತಿವೆ. ಮಾದಕ ಪದಾರ್ಥಗಳ ಸೇವನೆ ಮಾಡುವವರಿಗೆ ಪೊಲೀಸರು ಕಠಿಣ ಶಿಕ್ಷೆ ನೀಡುವುದಲ್ಲದೆ, ಮಾದಕ ಪದಾರ್ಥಗಳ ಸರಬರಾಜು ಮಾಡುವ ಮೂಲ ಕಂಡು ಹಿಡಿಯುವಲ್ಲಿ ಸಾರ್ವಜನಿಕರು ಕೈಜೋಡಿಸಬೇಕಾಗಿದೆ ಎಂದರು.

ದೊಡ್ಡಣಗುಡ್ಡೆ ಡಾ.ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ ಮಾತನಾಡಿ, ದೈನಂದಿನ ಕೆಲಸ ಕಾರ್ಯಗಳನ್ನು ಶಿಸ್ತುಬದ್ದವಾಗಿ ಮಾಡಬೇಕು, ಮಾದಕ ಪದಾರ್ಥಗಳು ಮಾತ್ರವಲ್ಲ, ಮೊಬೈಲ್‍ನ ದುಶ್ಚಟದಿಂದಲೂ ಯುವ ಸಮುದಾಯ ದೂರವಿರಬೇಕು. ಮಾದಕ ವ್ಯಸನ ವಿರೋಧಿ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗಬಾರದು. ಜೀವನದಲ್ಲಿ ವ್ಯಸನ ಮುಕ್ತವಾಗುವ ಬಗ್ಗೆ ಪಣತೊಡಬೇಕಿದೆ ಎಂದರು.

ಹೆಜಮಾಡಿ ಗ್ರಾಮ ಪಂ. ಅಧ್ಯಕ್ಷೆ ವಿಶಾಲಾಕ್ಷಿ ಉಮೇಶ್ ಪುತ್ರನ್, ಉಪಾಧ್ಯಕ್ಷ ಸುಧಾಕರ ಕರ್ಕೇರ, ಸದಸ್ಯ ವಾಮನ ಕೋಟ್ಯಾನ್ ನಡಿಕುದ್ರು, ತಾಲ್ಲೂಕು ಪಂಚಾಯಿತಿ ಸದಸ್ಯೆ ರೇಣುಕಾ ಪುತ್ರನ್, ಪತ್ರಕರ್ತ ಹರೀಶ್ ಹೆಜಮಾಡಿ, ದೊಡ್ಡಣಗುಡ್ಡೆ ಡಾ.ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ಸಮುದಾಯ ಸಮಾಜ ಕಾರ್ಯಕರ್ತ ಸುರೇಶ್ ಎಸ್ ನಾವೂರು, ಕರಾವಳಿ ಯುವಕ ವೃಂದದ ಅಧ್ಯಕ್ಷ ಅಶೋಕ್ ವಿ.ಕೆ., ಯುವತಿ ವೃಂದದ ಅಧ್ಯಕ್ಷೆ ಪವಿತ್ರ ಗಿರೀಶ್ ಉಪಸ್ಥಿತರಿದ್ದರು.

ಜಿತೇಂದ್ರ ಸ್ವಾಗತಿಸಿದರು, ಶ್ರೇಯಸ್ ವಂದಿಸಿದರು, ಸಂಪತ್ ಸಾಲ್ಯಾನ್ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News