ಸ್ವಿಸ್ ಬ್ಯಾಂಕ್‌ನಲ್ಲಿ ಹಣ ಜಮೆ: ಭಾರತಕ್ಕೆ 74ನೇ ಸ್ಥಾನ, ಅಗ್ರಸ್ಥಾನದಲ್ಲಿ ಬ್ರಿಟನ್

Update: 2019-06-30 15:29 GMT

 ಜಿನೆವಾ, ಜೂ.30: ಸ್ವಿಸ್ ಬ್ಯಾಂಕ್‌ನಲ್ಲಿ ಹಣ ಜಮೆ ಮಾಡಿರುವ ವ್ಯಕ್ತಿಗಳು ಅಥವಾ ಸಂಸ್ಥೆಗಳ ಪಟ್ಟಿಯಲ್ಲಿ ಬ್ರಿಟನ್ ಅಗ್ರಸ್ಥಾನದಲ್ಲಿದ್ದರೆ ಭಾರತ ಕಳೆದ ವರ್ಷಕ್ಕಿಂತ ಒಂದು ಸ್ಥಾನ ಕುಸಿತ ಕಂಡು 74ನೇ ಸ್ಥಾನದಲ್ಲಿದೆ ಎಂದು ಸ್ವಿಸ್ ನ್ಯಾಷನಲ್ ಬ್ಯಾಂಕ್‌ನ ವಾರ್ಷಿಕ ಅಂಕಿಅಂಶ ವರದಿ ತಿಳಿಸಿದೆ.

  ಬ್ರಿಟನ್ ನಂತರದ ಸ್ಥಾನದಲ್ಲಿ ಅನುಕ್ರಮವಾಗಿ ಅಮೆರಿಕ, ವೆಸ್ಟಿಂಡೀಸ್, ಫ್ರಾನ್ಸ್ ಮತ್ತು ಹಾಂಕಾಂಗ್ ರಾಷ್ಟ್ರಗಳಿವೆ. ಸ್ವಿಸ್ ಬ್ಯಾಂಕ್‌ನಲ್ಲಿರುವ ಒಟ್ಟು ವಿದೇಶಿ ಹಣದಲ್ಲಿ ಅಗ್ರಸ್ಥಾನದ ಐದು ರಾಷ್ಟ್ರಗಳೇ ಶೇ.50ಕ್ಕೂ ಹೆಚ್ಚಿನ ಪಾಲು ಹೊಂದಿವೆ. ಬಹಾಮಾಸ್, ಜರ್ಮನಿ, ಲುಕ್ಸೆಂಬರ್ಗ್, ಕೇಮಾನ್ ಐಲ್ಯಾಂಡ್ ಮತ್ತು ಸಿಂಗಾಪುರ ಐದರಿಂದ ಹತ್ತರವರೆಗಿನ ಸ್ಥಾನದಲ್ಲಿವೆ. ಸ್ವಿಸ್ ಬ್ಯಾಂಕ್‌ನಲ್ಲಿ ಜಮೆಯಾಗಿರುವ ವಿದೇಶಿ ಹಣದಲ್ಲಿ ಸುಮಾರು ಶೇ.75ರಷ್ಟು ಹಣ ಅಗ್ರಸ್ಥಾನದಲ್ಲಿರುವ 15 ರಾಷ್ಟ್ರಗಳ ನಾಗರಿಕರದ್ದಾಗಿದೆ.

 2017ರಲ್ಲಿ ಭಾರತ 88ನೇ ಸ್ಥಾನದಲ್ಲಿದ್ದರೆ 2018ರಲ್ಲಿ 73ನೇ ಸ್ಥಾನದಲ್ಲಿತ್ತು. ಈಗ ಸ್ವಿಸ್ ಬ್ಯಾಂಕ್‌ನಲ್ಲಿ ವಿದೇಶಿಯರು ಜಮೆ ಮಾಡಿರುವ ಒಟ್ಟು ಹಣದಲ್ಲಿ ಕೇವಲ 0.07 ಶೇಕಡಾ ಹಣ ಭಾರತೀಯರಿಗೆ ಸೇರಿದ್ದು ಎಂದು ಸ್ವಿಸ್ ನ್ಯಾಷನಲ್ ಬ್ಯಾಂಕ್(ಎಸ್‌ಎನ್‌ಬಿ)ನ ವಾರ್ಷಿಕ ವರದಿಯಲ್ಲಿ ತಿಳಿಸಲಾಗಿದೆ. ಬ್ರಿಟನ್‌ನ ಪ್ರಮಾಣ ಶೇ.26ಕ್ಕೂ ಅಧಿಕವಾಗಿದೆ.

ಮಾರಿಷಸ್ 71ನೇ, ಫಿಲಿಪೈನ್ಸ್ 54ನೇ, ವೆನೆಝುವೆಲಾ 53ನೇ, ಸೆಷೆಲ್ಸ್ 52ನೇ, ಥೈಲ್ಯಾಂಡ್ 39ನೇ, ಟರ್ಕಿ 30ನೇ, ಇಸ್ರೇಲ್ 28ನೇ, ಸೌದಿ ಅರೆಬಿಯಾ 21ನೇ, ಪನಾಮ 18ನೇ, ಇಟಲಿ 15ನೇ, ಆಸ್ಟ್ರೇಲಿಯಾ 13ನೇ, ಯುಎಇ 12ನೇ ಸ್ಥಾನದಲ್ಲಿವೆ.

ಭಾರತದ ನೆರೆದೇಶಗಳಾದ ಪಾಕಿಸ್ತಾನ 82ನೇ, ಬಾಂಗ್ಲಾದೇಶ 89ನೇ, ನೇಪಾಲ 109ನೇ, ಶ್ರೀಲಂಕಾ 141ನೇ, ಮ್ಯಾನ್ಮಾರ್ 187ನೇ ಮತ್ತು ಭೂತಾನ್ 193ನೇ ಸ್ಥಾನದಲ್ಲಿವೆ. ಐದು ‘ಬ್ರಿಕ್ಸ್’ ರಾಷ್ಟ್ರಗಳಲ್ಲಿ ಭಾರತ ಅತ್ಯಂತ ಕೆಳಗಿನ ಸ್ಥಾನ ಪಡೆದಿದ್ದರೆ 20ನೇ ಸ್ಥಾನದಲ್ಲಿರುವ ರಶ್ಯ ಅತೀಹೆಚ್ಚಿನ ಸ್ಥಾನದಲ್ಲಿದೆ. ಚೀನಾ 22ನೇ ಸ್ಥಾನ, ದಕ್ಷಿಣ ಆಫ್ರಿಕಾ 60ನೇ ಸ್ಥಾನ, ಬ್ರೆಝಿಲ್ 65ನೇ ಸ್ಥಾನದಲ್ಲಿದೆ.

2018ರಲ್ಲಿ ಭಾರತೀಯ ಗ್ರಾಹಕರು ಸ್ವಿಸ್ ಬ್ಯಾಂಕ್‌ನಲ್ಲಿಟ್ಟಿರುವ ಹಣದ ಪ್ರಮಾಣ ಸುಮಾರು ಶೇ.6 ರಷ್ಟು ಕಡಿಮೆಯಾಗಿದ್ದು 955 ಮಿಲಿಯನ್ ಸ್ವಿಸ್ ಫ್ರಾಂಕ್ಸ್(ಸುಮಾರು 6,757 ಕೋಟಿ ರೂ.)ಗೆ ತಲುಪಿದ್ದು ಕಳೆದ ಎರಡು ದಶಕದಲ್ಲಿ ಇದು ಅತ್ಯಂತ ಕಡಿಮೆಯಾಗಿದೆ ಎಂದು ವರದಿ ತಿಳಿಸಿದೆ.

ಸ್ವಚಾಲಿತ ಮಾಹಿತಿ ವಿನಿಮಯ ವ್ಯವಸ್ಥೆ

ಈ ಹಿಂದೆ ಸ್ವಿಸ್ ಬ್ಯಾಂಕ್‌ನಲ್ಲಿ ಜಮೆ ಮಾಡಿದ ಹಣದ ಬಗ್ಗೆ ಅತ್ಯಂತ ಕಟ್ಟುನಿಟ್ಟಿನ ರಹಸ್ಯ ಕಾಯ್ದುಕೊಳ್ಳಲಾಗುತ್ತಿತ್ತು. ಆದರೆ ಇತ್ತೀಚಿನ ಕೆಲ ವರ್ಷದಿಂದ ಸ್ವಿಸ್ ಸರಕಾರ ಭಾರತ ಹಾಗೂ ಇತರ ಹಲವು ರಾಷ್ಟ್ರಗಳೊಂದಿಗೆ ಸ್ವಚಾಲಿತ ಮಾಹಿತಿ ವಿನಿಮಯ ವ್ಯವಸ್ಥೆ ರಚಿಸಿಕೊಂಡಿರುವ ಹಿನ್ನೆಲೆಯಲ್ಲಿ ಸ್ವಿಸ್ ಬ್ಯಾಂಕ್‌ನ ಗೌಪ್ಯತೆಯ ಗೋಡೆ ದುರ್ಬಲವಾಗಿದೆ ಎಂದು ವಿಶ್ಲೇಷಿಸಲಾಗಿದೆ. ಈ ವರ್ಷದಿಂದ ಭಾರತ ಸ್ವಚಾಲಿತ ಮಾಹಿತಿ ವಿನಿಮಯ ವ್ಯವಸ್ಥೆಯಡಿ ಮಾಹಿತಿ ಪಡೆಯಲಿದೆ. ಅಲ್ಲದೆ ಅಕ್ರಮ ಹಣ ಜಮೆ ಮಾಡಿದ ದಾಖಲೆ ಒದಗಿಸಿದರೆ ಅಂತಹ ಖಾತೆಗಳ ಕುರಿತ ವಿವರವನ್ನು ಭಾರತ ಈಗಾಗಲೇ ಪಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News