ಪತ್ರಿಕೋದ್ಯಮಿ ಸತೀಶ ಪೈಗೆ ಪತ್ರಿಕೋದ್ಯಮ ದಿನದ ಗೌರವ ಪ್ರದಾನ
ಉಡುಪಿ, ಜೂ.30: ಹಿರಿಯ ಪತ್ರಿಕೋದ್ಯಮಿ ಉದಯವಾಣಿ ಸಮೂಹದ ರೂವಾರಿ ಟಿ.ಸತೀಶ ಯು.ಪೈ ಅವರ ಸುದೀರ್ಘ ಮಾಧ್ಯಮ ಸೇವೆಗಾಗಿ ಬೆಂಗಳೂರಿನ ಪತ್ರಕರ್ತರ ವೇದಿಕೆ ನೀಡುವ 2019ರ ರಾಜ್ಯಮಟ್ಟದ ಪತ್ರಿಕಾ ದಿನದ ಗೌರವವನ್ನು ಅವರ ಮಣಿಪಾಲ ನಿವಾಸದಲ್ಲಿ ರವಿವಾರ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪ್ರದಾನ ಮಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ, ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ, ಮಾಧ್ಯಮ ಸಂಸ್ಥೆಯನ್ನು ಕಟ್ಟಿ ಮುನ್ನಡೆಸುವ ಗುರುತರ ಜವಬ್ದಾರಿಯನ್ನು ನಿರ್ವಹಿಸಿ ಯಶಸ್ವಿ ಪತ್ರಿಕೋದ್ಯಮಿ ಯಾಗಿ ಇಂದಿಗೂ ಸಂಸ್ಥೆಯನ್ನು ಸಮರ್ಥ ವಾಗಿ ಮುನ್ನಡೆಸುತ್ತಿರುವುದು ಪ್ರಶಂಸಾರ್ಹ ವಿಚಾರ. ಪತ್ರಿಕೆಯು ಜನರ ನಡುವೆ ಹೋಗಿ ಸತ್ಯಾಂಶಗಳನ್ನು ಪರಿಶೀಲಿಸಿ ಜನ ಪರ ತೀರ್ಪು ನೀಡುವ ಕೆಲಸ ಮಾಡುತ್ತಿದೆ ಎಂದರು.
ಪ್ರಶಸ್ತಿ ಸ್ವೀಕರಿಸಿದ ಸತೀಶ್ ಯು.ಪೈ ಮಾತನಾಡಿ, ಮೂರು ತಿಂಗಳಿಗಿಂತ ಹೆಚ್ಚು ಕಾಲ ನಮ್ಮ ಪತ್ರಿಕೆ ಬದುಕುವುದಿಲ್ಲ ಎಂದು ಕೆಲವರು ಹೇಳಿದ್ದರು. ಓದುಗರ, ತಂತ್ರಜ್ಞರ, ಅಂದಿನಿಂದ ಇಂದಿನವರೆಗೆ ದುಡಿದ ನಿಷ್ಠಾವಂತರಿಂದ ನಮ್ಮ ಪತ್ರಿಕೆ ಇಂದು ಸುವರ್ಣ ಸಂಭ್ರಮವನ್ನು ಕಾಣುತ್ತಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತರ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಶೇಖರ ಅಜೆಕಾರು ಮಾತನಾಡಿ, ಕರಾವಳಿಗೆ ನ್ಯಾಯ ಒದಗಿಸುವ ಒಂದು ತುಳು ಅಥವಾ ಬಹುಭಾಷಾ ಚ್ಯಾನಲ್ ಮತ್ತು ತುಳು ದೈನಿಕ ಪತ್ರಿಕೆಗಳನ್ನು ಆರಂಭಿ ಸಲು ಸಾಧ್ಯವಾಗಬೇಕು ಎಂದು ಹೇಳಿದರು.
ತರಂಗ ಸಂಪಾದಕಿ ಸಂಧ್ಯಾ ಪೈ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಶಿಕ್ಷಣ ತಜ್ಞ ಎ.ನರಸಿಂಹ ಬೊಮ್ಮರಬೆಟ್ಟು, ಸಂಗೀತ ತಜ್ಞ ಉಡುಪಿ ವಾಸುದೇವ ಭಟ್, ಉದ್ಯಮಿ ವಿಶ್ವನಾಥ ಶೆಣೈ ಉಡುಪಿ, ಪುಸ್ತಕ ಪರಿವ್ರಾಜಕ ಕು.ಗೋ., ಕಲಾವಿದ ಪಿ.ಎನ್.ಆಚಾರ್ಯ ನುಡಿ ಗೌರವ ಸಲ್ಲಿಸಿದರು.
ತಂತ್ರಜ್ಞ ಶ್ರೀನಿವಾಸ ಶೆಟ್ಟಿಗಾರ್ ಅವರನ್ನು ಸತೀಶ ಪೈ ಗೌರವಿಸಿದರು. ಆಳ್ವಾಸ್ ನ್ಯೂಸಿಯಂನ ಕಾರ್ಡಿನೇಟರ್ ಶ್ರೀಕರ್ ಎಲ್. ಭಂಡಾರ್ ಕಾರ್, ಕಾದಂಬರಿಕಾರ ಪಿ.ವಿ.ಪ್ರದೀಪ್ ಕುಮಾರ್, ನರಸಿಂಹ ಮೂರ್ತಿ, ಪ್ರಶಾಂತ್ ಪೈ, ಸೌಮ್ಯಶ್ರೀ ಎಸ್.ಅಜೆಕಾರ್ ಮೊದಲಾದವರು ಉಪಸ್ಥಿತರಿದ್ದರು. ಸಮಾಜ ಸೇವಕ ಭುವನ ಪ್ರಸಾದ್ ಹೆಗ್ಡೆ ಸ್ವಾಗತಿಸಿದರು. ರಾಘವೇಂದ್ರ ಕರ್ವಾಲೋ ವಂದಿಸಿದರು.