ಜು.2ರಂದು ಬಿಜೆಪಿ ಸಂಸದೀಯ ಪಕ್ಷದ ಸಭೆ

Update: 2019-06-30 15:44 GMT

ಹೊಸದಿಲ್ಲಿ,ಜೂ.30: ಹಾಲಿ ಸಂಸತ್ ಅಧಿವೇಶನದ ಸಂದರ್ಭದಲ್ಲಿ ಬಿಜೆಪಿ ಸಂಸದೀಯ ಪಕ್ಷದ ಮೊದಲ ಸಭೆಯು ಮಂಗಳವಾರ ನಡೆಯಲಿದೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ಸಂಸದರಿಗೆ ಕಾರ್ಯಸೂಚಿಯನ್ನು ಮಂಡಿಸುವ ನಿರೀಕ್ಷೆಯಿದೆ. ತನ್ನ ಸರಕಾರವು ಮುಂಗಡಪತ್ರವನ್ನು ಮಂಡಿಸಲಿರುವ ಹಾಲಿ ಅಧಿವೇಶನದ ಮಹತ್ವದ ಜೊತೆಗೆ ಮೇ ತಿಂಗಳಿನಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಸರಕಾರದ ಪ್ರಮುಖ ನಿರ್ಧಾರಗಳ ಬಗ್ಗೆಯೂ ಮೋದಿ ಸಭೆಯಲ್ಲಿ ಮಾತನಾಡಬಹುದು.

ಸಭೆಯ ಕಾರ್ಯಸೂಚಿಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲವಾದರೂ ಪ್ರಧಾನಿ ಯಾವುದೇ ಮಹತ್ವದ ಅಂತರರಾಷ್ಟ್ರೀಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮರಳಿದ ನಂತರ ಅವರನ್ನು ಅಭಿನಂದಿಸುವುದು ಸಂಸದೀಯ ಪಕ್ಷದ ಸಭೆಯ ಸಂಪ್ರದಾಯವಾಗಿದೆ. ಜಪಾನಿನಲ್ಲಿ ಜಿ-20 ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಮೋದಿ ಶನಿವಾರ ಸ್ವದೇಶಕ್ಕೆ ಮರಳಿದ್ದಾರೆ.

ಹಿರಿಯ ಬಿಜೆಪಿ ನಾಯಕರಾದ ಎಲ್.ಕೆ.ಆಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ ಅವರು ಹಲವಾರು ದಶಕಗಳ ಬಳಿಕ ಮೊದಲ ಬಾರಿಗೆ ಸಂಸದೀಯ ಪಕ್ಷದ ಸಭೆಯಲ್ಲಿ ಭಾಗವಹಿಸುತ್ತಿಲ್ಲ. ಬಿಜೆಪಿಯು ತನ್ನ ಅಭ್ಯರ್ಥಿಗಳಿಗೆ 75 ವರ್ಷ ವಯೋಮಿತಿಯನ್ನು ನಿಗದಿಗೊಳಿಸಿರುವ ಹಿನ್ನೆಲೆಯಲ್ಲಿ ಈ ಇಬ್ಬರು ನಾಯಕರನ್ನು ಚುನಾವಣೆಗೆ ನಿಲ್ಲಿಸಿರಲಿಲ್ಲ.

ಬಿಜೆಪಿ ಸಂಸದೀಯ ಪಕ್ಷದ ಮೊದಲ ಸಭೆಯನ್ನು ಜೂ.25ಕ್ಕೆ ಕರೆಯಲಾಗಿತ್ತು. ಆದರೆ ರಾಜಸ್ಥಾನ ಬಿಜೆಪಿ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಮದನಲಾಲ ಸೈನಿ ಅವರ ನಿಧನದ ಹಿನ್ನೆಲೆಯಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News