×
Ad

ಜಿ.ಪಂ. ಅಧ್ಯಕ್ಷರಿಂದ ಸರ್ಕಾರಿ ಆಸ್ಪತ್ರೆ ವೈದ್ಯರ ಮೇಲೆ ವಾಗ್ದಾಳಿ: ವೈದ್ಯರಿಂದ ಶಾಸಕರಿಗೆ ದೂರು

Update: 2019-06-30 22:04 IST

ಪುತ್ತೂರು: ಪೊಲೀಸ್ ದೌರ್ಜನ್ಯಕ್ಕೊಳಗಾಗಿ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಅಪ್ರಾಪ್ತ ಬಾಲಕಿಯನ್ನು ಭೇಟಿ ಮಾಡಲು ಶನಿವಾರ ಸಂಜೆ ವೇಳೆ ಆಸ್ಪತ್ರೆಗೆ ಬಂದಿದ್ದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು, ಅರ್ಧ ಗಂಟೆಗಳ ಕಾಲ ಕಾದರೂ ತನ್ನನ್ನು ಭೇಟಿಯಾಗಿಲ್ಲ ಎಂಬ ಕಾರಣಕ್ಕಾಗಿ ಆಕ್ರೋಶಗೊಂಡು ಕರ್ತವ್ಯದಲ್ಲಿದ್ದ ವೈದ್ಯೆಯೊಬ್ಬರನ್ನು ಸಾರ್ವಜನಿಕವಾಗಿ ತರಾಟೆಗೆತ್ತಿಕೊಂಡು ವಾಗ್ದಾಳಿ ನಡೆಸಿರುವ ಘಟನೆ ಆಸ್ಪತ್ರೆಯ ವೈದರುಗಳ ಮತ್ತು ಸಿಬ್ಬಂದಿಯ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕುರಿತು ವೈದ್ಯರು ಶಾಸಕ ಸಂಜೀವ ಮಠಂದೂರು ಅವರಿಗೆ ಮೌಕಿಕವಾಗಿ ದೂರು ನೀಡಿದ್ದಾರೆ.

ದೌರ್ಜನ್ಯಕ್ಕೊಳಗಾಗಿದ್ದ ಬಾಲಕಿ ದಾಖಲಾಗಿದ್ದ ವಾರ್ಡಿಗೆ ಬಂದು ಅರ್ಧ ಗಂಟೆಗಳ ಕಾಲ ಕಾದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು, ಕರ್ತವ್ಯದಲ್ಲಿದ್ದ ವೈದ್ಯರನ್ನು ತರಾಟೆಗೆ ತೆಗೆದುಕೊಂಡಿದ್ದರು. ಒಬ್ಬ ಜನಪ್ರತಿನಿಧಿಯಾದ ನಾನು ಕರೆದಾಗಲೇ ಇಷ್ಟೊಂದು ಬೇಜವಾಬ್ದಾರಿ ತೋರಿಸಿದರೆ ಜನಸಾಮಾನ್ಯ ಕರೆಗೆ ನೀವು ಯಾವ ರೀತಿ ವರ್ತಿಸಬಹುದು ಎಂದು ಪ್ರಶ್ನಿಸಿ ರೇಗಾಡಿದ್ದರು. 

ಡಾ. ಅರ್ಚನಾ ಅವರು, ನಾನು ಯಾವುದೇ ಬೇಜವಾಬ್ದಾರಿಯಿಂದ ವರ್ತಿಸಿಲ್ಲ. ಇಲ್ಲಿ ರೋಗಿಗಳು ತಪಾಸಣೆಗಾಗಿ ಕಾಯುತ್ತಿದ್ದರು. ಅವರಿಗೆ ಚಿಕಿತ್ಸೆ ನೀಡುತ್ತಿದೆ ಎಂದು ಹೇಳಿದ್ದರು. ಆದರೆ ಅವರ ಮಾತು ಲೆಕ್ಕಿಸದೆ ಮತ್ತಷ್ಟು ಆಕ್ರೋಶ ವ್ಯಕ್ತ ಪಡಿಸಿದ್ದರು. ಈ ಘಟನೆಯಿಂದ ಅಸಮಾಧಾನಗೊಂಡಿರುವ ಆಸ್ಪತ್ರೆಯ ವೈದ್ಯರು ಈ ಕುರಿತು ಶಾಸಕ ಸಂಜೀವ ಮಠಂದೂರು ಅವರಿಗೆ ಮೌಕಿಕವಾಗಿ ದೂರು ನೀಡಿದ್ದಾರೆ. 

ಸರ್ಕಾರಿ ಆಸ್ಪತ್ರೆಯಲ್ಲಿ 13 ಮಂದಿ ವೈದ್ಯರಿರಬೇಕಾದಲ್ಲಿ 8 ಮಂದಿ ವೈದ್ಯರು ಮಾತ್ರ ಇದ್ದಾರೆ. ಪ್ರಸ್ತುತ 4 ಮಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದಿನಂಪ್ರತಿ 400ರಿಂದ 500 ಮಂದಿ ರೋಗಿಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಇಲ್ಲಿನ ವೈದ್ಯರಿದೆ. ಇಷ್ಟೊಂದು ಒತ್ತಡದ ಮಧ್ಯೆ ಕೆಲಸ ನಿರ್ವಹಿಸುತ್ತಿರುವ ವೈದ್ಯರು ಹಾಗೂ ಆಸ್ಪತ್ರೆಯ ಪರಿಸ್ಥಿತಿಯನ್ನು ಗಮನಿಸದೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು, ತಮ್ಮನ್ನು ವೈದ್ಯರು ಭೇಟಿಯಾಗಿಲ್ಲ ಎಂಬ ಕಾರಣಕ್ಕಾಗಿ ರೇಗಿ ಸಾರ್ವಜನಿಕವಾಗಿ ಅಧಿಕಾರ ದರ್ಪ ಚಲಾಯಿಸಿರುವುದು ಸರಿಯಲ್ಲ.ಇದು ನಮಗೆ ನೋವು ತಂದಿದೆ ಎಂದು ಆಸ್ಪತ್ರೆಯ ವೈದ್ಯರು ಮಾಧ್ಯಮ ಪ್ರತಿನಿಧಿಗಳ ಮುಂದೆ ತಿಳಿಸಿದ್ದಾರೆ. 

ಈ ಘಟನೆಯನ್ನು ಖಂಡಿಸಿ ಸೋಮವಾರ ಆಸ್ಪತ್ರೆಯ ವೈದ್ಯರು ಪ್ರತಿಭಟನೆ ನಡೆಸುತ್ತಾರೆ ಎಂದು ರವಿವಾರ ಸುದ್ದಿಯಾಗಿತ್ತು. ಇದನ್ನು  ನಿರಾಕರಿಸಿರುವ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಆಶಾ ಪುತ್ತೂರಾಯ ಅವರು ರೋಗಿಗಳಿಗೆ ಸಮಸ್ಯೆ ಮಾಡಲು ನಾವು ಬಯಸುವುದಿಲ್ಲ. ಸರ್ಕಾರಿ ಉದ್ಯೋಗಿಗಳಾಗಿರುವ ಕಾರಣ ನಾವು ಘಟನೆಯ ಕುರಿತು ಯಾವುದೇ ಹೇಳಿಕೆ ನೀಡುವುದಿಲ್ಲ. ಘಟನೆಯ ಸಂದರ್ಭದಲ್ಲಿ ಸ್ಥಳದಲ್ಲಿದ್ದ ರೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ಎಲ್ಲವೂ ಗೊತ್ತಿದೆ. ಈ ಕುರಿತು ಮೌಖಿಕವಾಗಿಯಷ್ಟೇ ಶಾಸಕರಿಗೆ ವಿಚಾರ ತಿಳಿಸಿದ್ದೇವೆ ಎಂದು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಆಸ್ಪತ್ರೆಯ ವೈದ್ಯರ ಕಡೆಯಿಂದ ಮೌಖಿಕ ದೂರು ಬಂದಿದೆ. ಜನಪ್ರತಿನಿಧಿಯಾಗಿರುವ ಜಿಲ್ಲಾ ಪಂಚಾಯುತ್ ಅಧ್ಯಕ್ಷರು ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಗೌರವ ನೀಡಬೇಕಿತ್ತು. ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಕೂಡ ವೈದ್ಯರನ್ನು ಕೊಠಡಿಗೆ ಕರೆದು ವಿಚಾರಸಬಹು ದಿತ್ತು. ಹಾಗಾಗಿ ಅಲ್ಲಿ ಎರಡೂ ಕಡೆಯಿಂದಲೂ ತಪ್ಪಾಗಿದೆ. ವೈದ್ಯರನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡಿರುವುದರಿಂದ ಮುಂದಕ್ಕೆ ರೋಗಿಗಳು ಹಾಗೂ ಸಾರ್ವಜನಿಕರು ಕೂಡ ವೈದ್ಯರನ್ನು ತರಾಟೆಗೆ ತೆಗೆದುಕೊಳ್ಳುವ ಪರಿಸ್ಥಿತಿ ಬರಬಹುದು. ಈ ಕುರಿತು ಪರಸ್ಪರ ಮಾತುಕತೆ ನಡೆಸಿ, ವಿವಾದವನ್ನು ಬಗೆಹರಿಸಲಾಗುವುದು ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.

ಪೊಲೀಸ್ ದೌರ್ಜನ್ಯಕ್ಕೊಳಗಾದ ಅಪ್ರಾಪ್ತ ದಲಿತ ಸಮುದಾಯದ ಬಾಲಕಿಯನ್ನು ಭೇಟಿ ಮಾಡಿ ವಿಚಾರಿಸಿದ ವೇಳೆ ಆಕೆಗೆ ಸ್ಕೇಲ್‍ನಿಂದ ಕೆನ್ನೆಗೆ ಹೊಡೆದಿರುವ, ಬೆತ್ತದಲ್ಲಿ ಬಡಿದಿರುವ, ಸೊಂಟದಲ್ಲಿ ಬಲ ಇಲ್ಲದಿರುವ ಕುರಿತು ದೂರಿಕೊಂಡಿದ್ದಾರೆ. ಈ ಕುರಿತು ಸ್ಪಷ್ಟಪಡಿಸಿಕೊಳ್ಳುವ ನಿಟ್ಟಿನಲ್ಲಿ ಆಕೆಯನ್ನು ತಪಾಸಣೆ ನಡೆಸಿದ ವೈದ್ಯರಲ್ಲಿ ಮಾಹಿತಿ ಪಡೆದುಕೊಳ್ಳುವ ಕರೆದಿದ್ದೆ. ಆದರೆ ಅಲ್ಲಿಯೇ ಓಡಾಡಿಕೊಂಡಿದ್ದ ವೈದ್ಯರು ಮುಕ್ಕಾಲು ಗಂಟೆ ಕಾದರೂ ಬಂದಿರಲಿಲ್ಲ . ವೈದ್ಯರು ಬಾರದ ಕಾರಣ ಜಿಲ್ಲಾ ಆರೋಗ್ಯಾಧಿಕಾರಿಗೆ ದೂರು ನೀಡಿದ್ದೆ. ಅವರ ಕರೆಗೂ ಸಂಬಂಧಪಟ್ಟ ವೈದ್ಯರು ಸ್ಪಂದನೆ ನೀಡಿಲ್ಲ. ಜಿಲ್ಲಾ ಪಂಚಾಯಿತಿ ಅಧ್ಯಕ್ಷರಿಗೇ ಈ ರೀತಿ ಅವಮಾನ ಮಾಡಿದರೆ ಸಾರ್ವಜನಿಕರಿಗೆ ಸ್ಪಂದನ ನೀಡುತ್ತಾರೆಯೇ, ಅವರೇ ಬರೆದಿದ್ದರೆ. ಅನಂತರ ನಾನೇ ವೈದ್ಯರ ಬಳಿ ಹೋಗಿದ್ದೇನೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು ಘಟನೆಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News