33 ವರ್ಷದಿಂದ ದಿನಂಪ್ರತಿ ಉಚಿತ ನೀರು ಪೂರೈಸುವ ಅಡ್ಡೂರಿನ ಝಕರಿಯಾ
ಮಂಗಳೂರು, ಜೂ.30: ಅಡ್ಡೂರಿನ ಹಾಜಿ ಝಕರಿಯಾ ಯಾನೆ ಜಕ್ರಿ ಅಡ್ಡೂರು ಕಳೆದ 33 ವರ್ಷದಿಂದ ಪ್ರತೀ ದಿನ ಆಸುಪಾಸಿನ 100ಕ್ಕೂ ಅಧಿಕ ಮನೆಮಂದಿಗೆ ಜಾತಿ ಭೇದವಿಲ್ಲದೆ ಉಚಿತ ನೀರು ಪೂರೈಕೆ ಮಾಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಮೂಲತಃ ಗುರುಪುರ ಏತಮೊಗರು ಬೈಲುಪೇಟೆ ನಿವಾಸಿಯಾಗಿದ್ದ ಝಕರಿಯಾ 1986ರಲ್ಲಿ ಅಡ್ಡೂರಿನ ಕುಚ್ಚಿಗುಡ್ಡೆಗೆ ಬಂದು ವಾಸ್ತವ್ಯ ಹೂಡಲು ನಿರ್ಧರಿಸಿದ್ದರು. ಹಾಗೇ ಮನೆ ಕಟ್ಟಲು ಆರಂಭಿಸಿದಾಗ ಎಲ್ಲೂ ನೀರಿನ ವ್ಯವಸ್ಥೆ ಇರಲಿಲ್ಲ. ಸುಡು ಬಿಸಿಲು ಮಾತ್ರವಲ್ಲ ಮಳೆಗಾಲದಲ್ಲೂ ಸುತ್ತಮುತ್ತಲ ಪ್ರದೇಶದಲ್ಲಿ ನೀರಿಗಾಗಿ ಸಾಕಷ್ಟು ದೂರ ಅಲೆದಾಡಬೇಕಾಗಿತ್ತು. ಹಾಗಾಗಿ ಹಾಜಿ ಝಕರಿಯಾ ಸ್ವತಃ ಬಾವಿ ತೋಡುವ ನಿರ್ಧಾರಕ್ಕೆ ಬಂದರು. ಅದರಂತೆ 60 ಅಡಿ ಆಳದ ಬಾವಿ ತೋಡಿಸಿದ ಝಕರಿಯಾರಿಗೆ ಬಳಿಕ ನೀರಿನ ಕೊರತೆಯೇ ಕಾಣಿಸಲಿಲ್ಲ. ಯಥೇಚ್ಛ ನೀರನ್ನು ಕಂಡ ಅಡ್ಡೂರು ಕುಚ್ಚಿಗುಡ್ಡೆ ಮತ್ತು ಆಸುಪಾಸಿನ ಜನರು ಬಾವಿಯಿಂದ ನೀರು ಸೇದಿಕೊಂಡು ಕೊಂಡೊಯ್ಯ ತೊಡಗಿದರು. ಅಂದಿನಿಂದ ಇಂದಿನವರೆಗೂ ಅಂದರೆ ಕಳೆದ 33 ವರ್ಷದಿಂದ ಈ ಬಾವಿಯ ನೀರನ್ನು ಬಳಸುತ್ತಿದ್ದಾರೆ.
ಕೆಲವು ಮನೆಯವರು ಇದೇ ಬಾವಿಗೆ ಅರ್ಧ, ಒಂದು, ಎರಡು ಎಚ್‌ಪಿ ಪಂಪ್‌ಸೆಟ್ ಅಳವಡಿಸಿ ನೀರು ಬಳಸಿದರೆ ಇನ್ನು ಕೆಲವರು ಸೇದಿಕೊಂಡು ನೀರನ್ನು ಕೊಂಡೊಯ್ಯುತ್ತಿದ್ದಾರೆ. ಈ ಬಾರಿಯ ಬೇಸಿಗೆಯಲ್ಲಿ ಗುರುಪುರ ಗ್ರಾಪಂ ಆಡಳಿತವು 10 ಎಚ್‌ಪಿ ಪಂಪ್ ಅಳವಡಿಸಿ ದಿನಂಪ್ರತಿ 2 ಗಂಟೆಗೂ ಅಧಿಕ ಕಾಲ ಕುಚ್ಚಿಗುಡ್ಡೆ ಹಾಗೂ ಆಸುಪಾಸಿನ ಜನರಿಗೆ ಕುಡಿಯುವ ನೀರನ್ನು ಪೂರೈಕೆ ಮಾಡಲು ಆರಂಭಿಸಿದೆ. ಮಳೆಗಾಲದ ಆರಂಭವಾದರೂ ಕೂಡ ಸರಿಯಾಗಿ ಮಳೆ ಬಾರದ ಕಾರಣ ಈಗಲೂ ಸ್ಥಳೀಯರು ಈ ಬಾವಿಯ ನೀರನ್ನು ಬಳಸುತ್ತಿದ್ದಾರೆ. ಅಂದಹಾಗೆ ಇದೀಗ 40 ಅಡಿಗೂ ಅಧಿಕ ನೀರು ಈ ಬಾವಿಯಲ್ಲಿದೆ.
ಕೃಷಿ-ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವ ಹಾಜಿ ಝಕರಿಯಾ ಅಡ್ಡೂರು ಸಮೀಪದ ಬೈಲುಪೇಟೆ ಜುಮಾ ಮಸೀದಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಶೈಕ್ಷಣಿಕ ಕ್ಷೇತ್ರ ಸಹಿತ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ.
‘ನೀರು ಅಲ್ಲಾಹನ ಅನುಗ್ರಹದಲ್ಲೊಂದು. ಹಾಗಾಗಿ ನೀರನ್ನು ಬಚ್ಚಿಡಲು ಯಾರಿಗೂ ಸಾಧ್ಯವಿಲ್ಲ. ಎಲ್ಲರೂ ಹಂಚಿಕೊಂಡು ಬಳಸಿದಾಗಲೇ ನನಗೆ ತೃಪ್ತಿ. 33 ವರ್ಷದ ಹಿಂದೆ ನಾನು ಇಲ್ಲಿ ಬಾವಿ ತೋಡಿಸಿಕೊಂಡಾಗ ಮುಂದೊಂದು ದಿನ ಈ ಬಾವಿಯ ನೀರನ್ನು ಎಲ್ಲರೂ ಬಳಸಲಿದ್ದಾರೆ ಎಂಬ ಕಲ್ಪನೆಯೇ ಇರಲಿಲ್ಲ. ಇದೀಗ ಜನರು ನೀರನ್ನು ಯಥೇಚ್ಛವಾಗಿ ಬಳಸುವುದನ್ನು ಕಾಣುವಾಗ ತುಂಬಾ ಖುಷಿಯಾಗುತ್ತದೆ. ಜನ ಬಳಕೆಯ ನೀರು ಮತ್ತು ದಾರಿಗೆ ಆಕ್ಷೇಪಿಸುವುದು ಮಾನವೀಯತೆಯಲ್ಲ. ಅಲ್ಲದೆ ಇದರಲ್ಲಿ ನಾನು ಯಾವುದೇ ಫಲಾಪೇಕ್ಷೆ ಹೊಂದಿಲ್ಲ ಎಂದು ಝಕರಿಯಾ ಹೇಳುತ್ತಾರೆ.
‘ಫಲ್ಗುಣಿ ನದಿಯಿಂದ ಪಂಪಿಂಗ್ ಮಾಡಲಾದ ನೀರು ಶುದ್ಧೀಕರಿಸಬೇಕಾಗುತ್ತದೆ. ಆದರೆ ಜಕ್ರಿಯವರು ಉದಾರವಾಗಿ ಒದಗಿಸಿರುವ ಬಾವಿ ನೀರಿಗೆ ಶುದ್ಧೀಕರಣ ಬೇಕಿಲ್ಲ. ಸುಮಾರು 100ರಷ್ಟು ಮನೆಗಳಿಗೆ ಈ ಬಾವಿಯ ನೀರನ್ನು ಪೂರೈಸಲಾಗುತ್ತಿದೆ. ಸಾರ್ವಜನಿಕರು ಬಳಸುವ ನೀರಿನ ವಿದ್ಯುತ್ ಬಿಲ್ ಅನ್ನು ಗ್ರಾಪಂ ಆಡಳಿತವೇ ಪಾವತಿಸುತ್ತಿದೆ’ ಎಂದು ಗ್ರಾಪಂ ಪಿಡಿಒ ಅಬೂಬಕ್ಕರ್ ಹೇಳುತ್ತಾರೆ.
ಒಟ್ಟಿನಲ್ಲಿ ಹಾಜಿ ಝಕರಿಯಾ ಯಾನೆ ಜಕ್ರಿ ಅಡ್ಡೂರು ಅವರು ಸದ್ದಿಲ್ಲದೆ ಸೇವೆಗೈದು ಸ್ಥಳೀಯರ ಪ್ರೀತಿಗೆ ಪಾತ್ರರಾಗಿದ್ದಾರೆ.