×
Ad

ಚೂರಿ ಇರಿತಕ್ಕೊಳಗಾದ ವಿದ್ಯಾರ್ಥಿನಿಯನ್ನು ಭೇಟಿಯಾದ ಯು.ಟಿ. ಖಾದರ್

Update: 2019-06-30 22:18 IST

ಉಳ್ಳಾಲ: ಚೂರಿ ಇರಿತಕ್ಕೊಳಗಾಗಿ ಗಂಭೀರ ಸ್ಥಿತಿಯಲ್ಲಿ ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಲ್ಪಟ್ಟ ಬಗಂಬಿಲದ ನಿವಾಸಿ ಕಾರ್ಕಳ ಖಾಸಗಿ ಕಾಲೇಜು ವಿದ್ಯಾರ್ಥಿನಿಯ ಆರೋಗ್ಯ ಸ್ಥಿತಿಯಲ್ಲಿ ಸ್ವಲ್ಪ ಚೇತರಿಕೆ ಕಂಡುಬಂದಿದೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಆಕೆ ಕಳೆದ ಎರಡು ದಿನಗಳಲ್ಲಿ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ ಎಂದು ಆಸ್ಪತ್ರೆಯಲ್ಲಿರುವ ಆಕೆಯ ಸಂಬಂಧಿಕರು ತಿಳಿಸಿದ್ದಾರೆ.

ವಿದ್ಯಾರ್ಥಿನಿಗೆ ಚೂರಿಯಿಂದ ಇರಿದು ತಾನೂ ಕತ್ತು ಸೀಳಿಕೊಂಡು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದ ಆರೋಪಿ ಯುವಕನನ್ನು ಅದೇ ಆಸ್ಪತ್ರೆಯ ಮಾನಸಿಕ ಚಿಕಿತ್ಸಾ ವಿಭಾಗದಲ್ಲಿರಿಸಿ ಪೊಲೀಸ್ ಬಂದೋಬಸ್ತಿನಲ್ಲಿ ಚಿಕಿತ್ಸೆ ಮುಂದುವರಿದಿದ್ದು ಗುಣಮುಖನಾದರೆ ಶೀಘ್ರವೇ ನ್ಯಾಯಾಂಗ ಬಂಧನಕ್ಕೆ ಒಳಪಡಿಸುವ ಸಾಧ್ಯತೆ ಇದೆ.

ವಿದ್ಯಾರ್ಥಿನಿಗೆ ರವಿವಾರ ಎರಡು ಯುನಿಟ್ ರಕ್ತ ನೀಡಲಾಗಿದೆ. ಸಾಮಾನ್ಯವಾಗಿ ಮಹಿಳೆಯರಲ್ಲಿ 11ರಿಂದ 13ಹಿಮೋಗ್ಲೋಬಿನ್ ಬೇಕಿದ್ದರೂ ಈಕೆಯಲ್ಲಿ ಈಗ 9 ಅಂಶವಿದ್ದು ಹಿಮೋಗ್ಲೋಬಿನ್ ಅಂಶದಲ್ಲಿ ಸ್ವಲ್ಪ ಇಳಿಮುಖವಾಗಿದೆ. ಆಸ್ಪತ್ರೆಯ ತಜ್ಞ ಏಳು ವೈದ್ಯರ ತಂಡ ಚಿಕಿತ್ಸೆ ಮುಂದುವರಿಸಿದ್ದಾರೆ.

ಸಚಿವ ಯು.ಟಿ.ಖಾದರ್ ಭೇಟಿ

ರವಿವಾರ ಸಚಿವ ಯು.ಟಿ. ಖಾದರ್ ಆಸ್ಪತ್ರೆಗೆ ಭೇಟಿ ನೀಡಿ ಯುವತಿಯ ಪೋಷಕರಿಗೆ ಸಮಾಧಾನ ಹೇಳಿ ಖಾದರ್ ವೈಯಕ್ತಿಕವಾಗಿ ಸಹಾಯಧನ ನೀಡಿದರು. ಬಳಿಕ ಮಾತನಾಡಿದ ಯುವತಿ ಆರೋಗ್ಯ ಸ್ಥಿತಿ ಚೇತರಿಸಿಕೊಳ್ಳುತ್ತಿದೆ. ಕ್ಲಪ್ತ ಸಮಯಕ್ಕೆ ಆಸ್ಪತ್ರೆ, ವೈದ್ಯರ ತಂಡ ಹಾಗೂ ಪ್ರಮುಖವಾಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನರ್ಸ್ ನಿಮ್ಮಿ ಹಾಗೂ ಆಂಬ್ಯುಲೆನ್ಸ್ ಚಾಲಕ ಪ್ರವೀಣ್ ಅವರಿಗೆ ಅಭಿನಂದಿಸಿದರು.

ಆಸ್ಪತ್ರೆ ನರ್ಸ್‍ಗೆ ಶೌರ್ಯ ಪ್ರಶಸ್ತಿ ದೊರಕಿಸುವ ಭರವಸೆ ನೀಡಿದರು. ಮಾದಕ ವ್ಯಸನ ಜಿಲ್ಲೆಯಲ್ಲಿ ವ್ಯಾಪಕವಾಗಿದೆ ಎಂಬ ಖೇದವಿದೆ. ನಿಯಂತ್ರಣಕ್ಕೆ ಕ್ರಮ ನಿರಂತರವಾಗಿದ್ದರೂ, ಮುಂದುವರಿಯುತ್ತಲೇ ಇದೆ. ಪೊಲೀಸ್ ಇಲಾಖೆಗೆ ಇನ್ನಷ್ಟು ಒತ್ತಡ ಹಾಕಲಾಗುವುದು. ಇಂತಹ ವ್ಯಸನದಿಂದಲೇ ದೀಕ್ಷಾ ಮೇಲೆ ದಾಳಿಯಾಗಿರುವ ಸಾಧ್ಯತೆ ಇದೆ. ದೇವರ ದಯೆಯಿಂದ ಆಕೆ ಬದುಕಿ ಬರಬೇಕೆಂಬುದು ಎಲ್ಲರ ಆಶಯ. ಆರೋಪಿ ಈಗಾಗಲೇ ಪೊಲೀಸ್ ವಶದಲ್ಲಿದ್ದಾನೆ. ಆತನ ಮೇಲೆ ಕಠಿಣ ಕಾನೂನು ಕ್ರಮ ಜರಗಿಸುವ ವಿಶ್ವಾಸ ಪೊಲೀಸ್ ಇಲಾಖೆಯಿಂದ ದೊರೆತಿದೆ. ಸಂಸದೆ ಶೋಭಾ ನನ್ನ ಮೇಲೆ ಮಾಡಿರುವ ಆರೋಪಕ್ಕೆ ಪ್ರತ್ಯಾರೋಪ ಮಾಡುವುದಿಲ್ಲ. ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕೆಂಬ ಉತ್ತಮ ಅಂಶಗಳನ್ನು ಹೇಳಿದರೆ ಅದನ್ನು ಸ್ಬೀಕರಿಸುತ್ತೇನೆ. ಅದು ಬಿಟ್ಟು ಸಂಸದೆಯಾಗಿ ಸರಿಯಾಗಿ ಕ್ಷೇತ್ರಕ್ಕೆ ಬಾರದೆ ಕಾರ್ಯನಿರ್ವಹಿಸದವರು ಮೊದಲಿಗೆ ಅವರ ಜವಾಬ್ದಾರಿ ನಿರ್ವಹಿಸಲಿ ಎಂಬುದು ನನ್ನ ಆಶಯ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News