ಅಫ್ಘಾನ್: ತಾಲಿಬಾನ್ ದಾಳಿಗೆ ಕನಿಷ್ಠ 8 ಮಂದಿ ಚು.ಆಯೋಗ ಸಿಬ್ಬಂದಿ ಸಾವು

Update: 2019-06-30 17:43 GMT

ಕಂದಹಾರ್,ಜೂ.30: ದಕ್ಷಿಣ ಅಫ್ಘಾನಿಸ್ತಾನದಲ್ಲಿ ಶಂಕಿತ ತಾಲಿಬಾನ್ ಬಂಡುಕೋರರ ನಡೆಸಿದ ದಾಳಿಯಲ್ಲಿ ಚುನಾವಣಾ ಆಯೋಗದ ಕನಿಷ್ಠ ಎಂಟು ಮಂದಿ ಉದ್ಯೋಗಿಗಳು ಸಾವನ್ನಪ್ಪಿದ್ದಾರೆ.

  ದಕ್ಷಿಣ ಕಂದಹಾರ್ ಪ್ರಾಂತದ ಮಾರುಫ್ ಜಿಲ್ಲಾ ಕೇಂದ್ರದಲ್ಲಿ ಸರಕಾರಿ ಕಚೇರಿಯೊಂದರ ಕಟ್ಟಡದಲ್ಲಿ ಮತದಾರರ ನೋಂದಣಿಗಾಗಿ ನಿಯೋಜಿತರಾಗಿದ್ದ ಸಿಬ್ಬಂದಿಯ ಮೇಲೆ ತಾಲಿಬಾನ್ ಬಂಡುಕೋರರು ಸ್ಫೋಟಗಳಿಂದ ತುಂಬಿದ ವಾಹನಗಳೊಂದಿಗೆ ದಾಳಿ ನಡೆಸಿದರು ಎಂದು ಸ್ವತಂತ್ರ ಚುನಾವಣಾ ಆಯೋಗದ ವಕ್ತಾರ ಝಬಿಯುಲ್ಲಾ ಸದಾತ್ ತಿಳಿಸಿದ್ದಾರೆ.

ದಾಳಿಯಲ್ಲಿ ಎಂಟು ಮಂದಿ ಚುನಾವಣಾ ಆಯೋಗದ ಸಿಬ್ಬಂದಿ ಜೊತೆ ಕೆಲವು ಭದ್ರತಾ ಪಡೆಗಳ ಯೋಧರೂ ಸಾವನ್ನಪ್ಪಿದ್ದಾರೆಂದು ಕಂದಹಾರ್ ಪ್ರಾಂತದ ಪೊಲೀಸ್ ವಕ್ತಾರ ಖಾಸಿಮ್ ಅಫ್ಘಾನ್ ತಿಳಿಸಿದ್ದಾರೆ. ಈ ದಾಳಿಯ ಹೊಣೆಯನ್ನು ತಾಲಿಬಾನ್ ವಹಿಸಿಕೊಂಡಿರುವುದಾಗಿ ವರದಿಯಾಗಿದೆ.

 ಅಫ್ಘಾನಿಸ್ತಾನದ ಅಧ್ಯಕ್ಷೀಯ ಚುನಾವಣೆಯನ್ನು ಈ ಮೊದಲು ಎರಡು ಬಾರಿ ಮುಂದೂಡಲಾಗಿದ್ದು, ಇದೀಗ ಸೆಪ್ಟೆಂಬರ್ 28ರಂದು ಚುನಾವಣಾ ದಿನಾಂಕವಾಗಿ ನಿಗದಿಪಡಿಸಲಾಗಿದೆ.

ಶನಿವಾರ ತಾಲಿಬಾನ್ ಬಂಡುಕೋರರು ಉತ್ತರ ಅಫ್ಘಾನಿಸ್ತಾನದಲ್ಲಿ ನಡೆಸಿದ ಇನ್ನೊಂದು ದಾಳಿಯಲ್ಲಿ 25 ಸರಕಾರಿ ಪರವಾಗಿರುವ ಪ್ರಜಾಸೈನಿಕರನ್ನು (ಮಿಲಿಶಿಯಾ) ಹತ್ಯೆಗೈದಿರುವುದಾಗಿ ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News