ಮುಂಗಾರು ವಿಳಂಬ; ಕೃಷಿ ಚಟುವಟಿಕೆಗೆ ಹಿನ್ನಡೆ

Update: 2019-07-01 14:49 GMT

ಮುಂಬೈ, ಜು.1: ಜೂನ್ ಮುಗಿದರೂ ದೇಶದಲ್ಲಿ ಮುಂಗಾರು ಮಳೆ ಇನ್ನೂ ಕಣ್ಣಾಮುಚ್ಚಾಲೆಯಾಟ ಆಡುತ್ತಿದ್ದು, ಈ ಬಾರಿಯ ಜೂನ್ ತಿಂಗಳು ಕಳೆದ ಐದು ವರ್ಷದಲ್ಲೇ ಅತ್ಯಂತ ಒಣಗಿದ (ಶುಷ್ಕ) ಜೂನ್ ತಿಂಗಳಾಗಿ ಪರಿಣಮಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮುಂಗಾರು ಮಳೆ ಕಡಿಮೆಯಾಗಿರುವುದರಿಂದ ದೇಶದಲ್ಲಿ ಕೃಷಿ ಚಟುವಟಿಕೆ ಹಾಗೂ ಅರ್ಥವ್ಯವಸ್ಥೆಯ ಮೇಲೆ ಪರಿಣಾಮ ಬೀರಲಿದೆ. ಇದುವರೆಗಿನ ಮಳೆ ಪ್ರಮಾಣ ಸರಾಸರಿಗಿಂತ ಮೂರನೇ ಒಂದರಷ್ಟು ಕಡಿಮೆಯಾಗಿದೆ. ಅಲ್ಲದೆ ಕಬ್ಬು ಬೆಳೆಯುವ ಉತ್ತರಭಾರತದ ರಾಜ್ಯ ಉತ್ತರಪ್ರದೇಶದಲ್ಲಿ ಮುಂಗಾರು ಮಳೆ ನೀರು ಪ್ರಮಾಣ ಶೇ.61ರಷ್ಟು ಕಡಿಮೆಯಾಗಿದೆ ಎಂದು ಹಮಾವಾನ ಇಲಾಖೆಯ ಅಂಕಿಅಂಶ ತಿಳಿಸಿದೆ.

ಮುಂಗಾರು ವಿಳಂಬದಿಂದ ಕೃಷಿ ಚಟುವಟಿಕೆಯೂ ವಿಳಂಬವಾಗಿದ್ದು, ಜೂನ್ 28ರ ವೇಳೆಗೆ 14.7 ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿ ಬೀಜ ಬಿತ್ತುವಿಕೆ ನಡೆದಿದ್ದು ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಇದು ಶೇ.10ರಷ್ಟು ಕಡಿಮೆಯಾಗಿದೆ. ದೇಶದ ಅರ್ಧಾಂಶದಷ್ಟು ಕೃಷಿ ಯೋಗ್ಯ ಭೂಮಿ ಮಳೆನೀರನ್ನು ಆಶ್ರಯಿಸಿದ್ದು ಅರ್ಥವ್ಯವಸ್ಥೆಯ ಶೇ.15ರಷ್ಟು ಅಂಶ ಕೃಷಿಗೆ ಸಂಬಂಧಿಸಿದೆ. ಸಾಮಾನ್ಯವಾಗಿ ಜುಲೈ 1ರ ವೇಳೆಗೆ ದೇಶವಿಡೀ ವ್ಯಾಪಿಸುತ್ತದೆ, ಆದರೆ ಈ ವರ್ಷ ಕೇವಲ ಮೂರನೇ ಎರಡರಷ್ಟು ವ್ಯಾಪ್ತಿಗೆ ಮಾತ್ರ ವಿಸ್ತರಿಸಿದೆ. ಮುಂದಿನ ಎರಡು-ಮೂರು ವಾರಗಳಲ್ಲಿ ಮಳೆಯ ಪ್ರಮಾಣ ಹೆಚ್ಚದಿದ್ದರೆ ಕಟಾವಿನ ಸಂದರ್ಭ ಸಮಸ್ಯೆಯಾಗುತ್ತದೆ. ರೈತರಿಗೆ ಟ್ರಾಕ್ಟರ್‌ನಿಂದ ಹಿಡಿದು ಗ್ರಾಹಕ ಸರಕಿನವರೆಗೆ ಎಲ್ಲವನ್ನೂ ಪೂರೈಸುವ ಕಂಪೆನಿಗಳು ಸಮಸ್ಯೆಗೆ ಸಿಲುಕಲಿವೆ.

ಕಳೆದ ವರ್ಷ ದೇಶದ ಹಲವೆಡೆ ಕಾಡಿದ ಬರಪರಿಸ್ಥಿತಿಯಿಂದ ಅಪಾರ ಬೆಳೆ ನಾಶ, ಜಾನುವಾರುಗಳ ಸಾವು ಸಂಭವಿಸಿತ್ತಲ್ಲದೆ ಜಲಾಶಯಗಳು ಬರಿದಾಗಿದ್ದವು. ನಗರಗಳಿಗೆ ನೀರು ಪೂರೈಸುವ ಜಲಸಂಪನ್ಮೂಲಗಳೂ ಬತ್ತಿ ಹೋಗಿದ್ದವು. ಭಾರತದ ಪಶ್ಚಿಮ ಮತ್ತು ಮಧ್ಯಭಾಗದಲ್ಲಿ ಹತ್ತಿ, ಸೋಯಾಬೀನ್ಸ್ ಪ್ರಮುಖ ಬೆಳೆಯಾಗಿದ್ದು, ಇಲ್ಲಿ ಜೂನ್ ತಿಂಗಳ ಪ್ರಥಮಾರ್ಧದಲ್ಲಿ ಉತ್ತಮ ಮುಂಗಾರು ಮಳೆಯಾಗುವ ನಿರೀಕ್ಷೆಯಿದೆ.

ಆದರೆ ಉತ್ತರ ಭಾರತದಲ್ಲಿ ಸರಾಸರಿಗಿಂತ ಕಡಿಮೆ ಪ್ರಮಾಣದಲ್ಲಿ ಇರಲಿದೆ. ಜುಲೈ ತಿಂಗಳ ಉತ್ತರಾರ್ಧದಲ್ಲಿ ಉತ್ತರ-ಪಶ್ಚಿಮ ಭಾರತದಲ್ಲಿ ಮಳೆಪ್ರಮಾಣ ಸುಧಾರಿಸಲಿದೆ, ಆದರೆ ಕೇಂದ್ರ ಮತ್ತು ಪಶ್ಚಿಮ ಭಾರತದಲ್ಲಿ ಮಳೆಯ ತೀಕ್ಷ್ಣತೆ ಕಡಿಮೆಯಾಗಲಿದೆ. ಒಟ್ಟಾರೆ, ಭಾರತದಲ್ಲಿ ಜುಲೈ ತಿಂಗಳಲ್ಲೂ ಮಳೆ ಕೊರತೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. 2014ರಲ್ಲಿ ಜೂನ್ ತಿಂಗಳಲ್ಲಿ ಶೇ.42ರಷ್ಟು ಕಡಿಮೆ ಮಳೆಯಾಗಿದ್ದರೂ ಬಳಿಕ ಸ್ವಲ್ಪ ಚೇತರಿಕೆ ಕಂಡಿದ್ದರಿಂದ ಒಟ್ಟಾರೆ ಮುಂಗಾರು ಅವಧಿ(ಜೂನ್‌ನಿಂದ ಸೆಪ್ಟೆಂಬರ್)ಯಲ್ಲಿ ಮಳೆ ಕೊರತೆಯ ಪ್ರಮಾಣ ಶೇ.12ಕ್ಕೆ ತಗ್ಗಿತ್ತು. ಈ ವರ್ಷ ದೇಶದಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದರೆ, ಖಾಸಗಿ ಮುನ್ಸೂಚಕ ಸಂಸ್ಥೆ ‘ಸ್ಕೈಮೆಟ್’ ಸಾಮಾನ್ಯಕ್ಕಿಂತ ಕಡಿಮೆ ಪ್ರಮಾಣದ ಮಳೆಯಾಗುವ ಮುನ್ಸೂಚನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News