ಹಾಂಕಾಂಗ್ ಚೀನಾಕ್ಕೆ ಹಸ್ತಾಂತರ ವಿರೋಧಿಸಿ ಪ್ರತಿಭಟನೆ

Update: 2019-07-01 18:14 GMT

ಹಾಂಕಾಂಗ್, ಜು. 1: ಹಾಂಕಾಂಗ್ ಚೀನಾಕ್ಕೆ ಹಸ್ತಾಂತರಗೊಂಡ ವಾರ್ಷಿಕ ದಿನದ ಸಂದರ್ಭದಲ್ಲಿ ಸೋಮವಾರ ಜನರು ಭಾರೀ ಸಂಖ್ಯೆಯಲ್ಲಿ, ಮೆಣಸಿನ ಹುಡಿಯ ಸ್ಪ್ರೇ ಹಿಡಿದು ನಿಂತಿದ್ದ ಪೊಲೀಸರನ್ನು ಎದುರಿಸಿ ಹಾಂಕಾಂಗ್ ಸಂಸತ್ತಿಗೆ ನುಗ್ಗಲು ಪ್ರಯತ್ನಿಸಿದರು.

 ಕೆಲವು ವಾರಗಳ ಹಿಂದೆ, ಹಾಂಕಾಂಗ್‌ನಿಂದ ಆರೋಪಿಗಳನ್ನು ಚೀನಾಕ್ಕೆ ಗಡಿಪಾರು ಮಾಡುವ ಮಸೂದೆಯನ್ನು ವಿರೋಧಿಸುವ ಬೃಹತ್ ಪ್ರತಿಭಟನೆಗಳ ಕೇಂದ್ರವಾಗಿದ್ದ ನಗರ ಸೋಮವಾರ ಮತ್ತೊಮ್ಮೆ ಬೃಹತ್ ಪ್ರತಿಭಟನೆಗಳಿಗೆ ಸಾಕ್ಷಿಯಾಯಿತು.

ಪ್ರಜಾಪ್ರಭುತ್ವಪರ ಹೋರಾಟಗಾರರು ಬೃಹತ್ ಪ್ರತಿಭಟನಾ ಮೆರವಣಿಗೆಗಳನ್ನು ನಡೆಸಿದರು.

ಪ್ರತಿಭಟನಕಾರರು ಸಂಸತ್ತಿನ ಕಿಟಿಕಿ ಗಾಜುಗಳನ್ನು ಒಡೆದರು ಹಾಗೂ ಲೋಹದ ಗಾಡಿಯನ್ನು ಗಾಜಿನ ಬಾಗಿಲುಗಳಿಗೆ ಢಿಕ್ಕಿ ಹೊಡೆಸಿ ಸಂಸತ್ತಿನ ಒಳ ನುಗ್ಗಲು ಪ್ರಯತ್ನಿಸಿದರು.

ಕಟ್ಟಡದ ಒಳಗಿದ್ದ ಪೊಲೀಸರು ಆರಂಭದಲ್ಲಿ ಮೇಲಿನಿಂದ ಮೆಣಸಿನ ಹುಡಿಯ ದ್ರಾವಣವನ್ನು ಪ್ರತಿಭಟನಕಾರರತ್ತ ಎರಚಿದರು. ಇದನ್ನು ತಡೆಯಲು ಜನರು ಕೊಡೆ ಬಿಡಿಸಿದರು.

ಕೆಲವು ಪ್ರಜಾಪ್ರಭುತ್ವಪರ ಸಂಸದರು ಮಧ್ಯಪ್ರವೇಶಿಸಿ ಸಂಸತ್ತಿಗೆ ನುಗ್ಗುವುದರಿಂದ ಹಿಂದೆ ಸರಿಯುವಂತೆ ಕೋರಿದರು.

1997 ಜುಲೈ 1ರಂದು ಹಾಂಕಾಂಗ್‌ನ ಆಡಳಿತವನ್ನು ಬ್ರಿಟನ್ ಚೀನಾಕ್ಕೆ ಹಸ್ತಾಂತರಿಸಿತ್ತು. ಆದಾಗ್ಯೂ, ಹಾಂಕಾಂಗ್‌ನಲ್ಲಿ ಈಗಲೂ ‘ಒಂದು ದೇಶ, ಎರಡು ವ್ಯವಸ್ಥೆಗಳು’ ಎಂಬ ವ್ಯವಸ್ಥೆಯ ಆಡಳಿತವಿದೆ.

ಹಾಂಕಾಂಗ್‌ನಲ್ಲಿ ಪ್ರಧಾನ ನೆಲ ಚೀನಾದಲ್ಲಿ ಕಾಣಸಿಗದ ಹಕ್ಕುಗಳು ಮತ್ತು ಸ್ವಾತಂತ್ರಗಳಿವೆ. ಆದರೆ, ಈ ವ್ಯವಸ್ಥೆಯಿಂದ ಚೀನಾ ಈಗಾಗಲೇ ಹಿಂದೆ ಸರಿಯುತ್ತಿದೆ ಎಂಬುದಾಗಿ ಹೆಚ್ಚಿನ ನಿವಾಸಿಗಳು ಭಾವಿಸಿದ್ದಾರೆ.

ರವಿವಾರ ಇಲ್ಲಿ ಪೊಲೀಸ್ ಪರವಾಗಿ ಪ್ರತಿಭಟನೆ ನಡೆದಿರುವುದನ್ನು ಸ್ಮರಿಸಬಹುದಾಗಿದೆ. ಪ್ರತಿಭಟನಕಾರರು ಚೀನಾ ಪರ ಘೋಷಣೆಗಳನ್ನೂ ಕೂಗಿದರು.

ಹಾಂಕಾಂಗ್ ಬಗ್ಗೆ ಬ್ರಿಟನ್‌ಗೆ ಈಗ ಜವಾಬ್ದಾರಿಯಿಲ್ಲ: ಚೀನಾ

ಹಾಂಕಾಂಗ್ ಬಗ್ಗೆ ಈಗ ಬ್ರಿಟನ್‌ಗೆ ಯಾವುದೇ ಜವಾಬ್ದಾರಿಯಿಲ್ಲ, ತನ್ನ ಮಾಜಿ ವಸಾಹತಿನ ಬಗ್ಗೆ ಹೇಳಿಕೆಗಳನ್ನು ನೀಡುವುದನ್ನು ಅದು ನಿಲ್ಲಿಸಬೇಕು ಎಂದು ಚೀನಾದ ವಿದೇಶ ಸಚಿವಾಲಯ ಸೋಮವಾರ ಹೇಳಿದೆ.

ಹಾಂಕಾಂಗ್ ಕುರಿತು ಚೀನಾದೊಂದಿಗೆ ಮಾಡಿಕೊಂಡಿರುವ ಜಂಟಿ ಘೋಷಣೆಗೆ ತಾನು ಬದ್ಧವಾಗಿರುವುದಾಗಿ ಬ್ರಿಟಿಶ್ ಸರಕಾರ ಪುನರುಚ್ಚರಿಸಿದ ಬಳಿಕ ಚೀನಾ ಈ ಹೇಳಿಕೆ ನೀಡಿದೆ.

ಹಾಂಕಾಂಗ್ ಚೀನಾಕ್ಕೆ ಹೋದ ಬಳಿಕ ಅದನ್ನು ಹೇಗೆ ಆಳಬೇಕು ಎಂಬುದರ ಕುರಿತ ನೀಲನಕಾಶೆಯು ಐತಿಹಾಸಿಕ ದಾಖಲೆಯಾಗಿದೆ ಹಾಗೂ ಅದಕ್ಕೆ ಯಾವುದೇ ಪ್ರಾಯೋಗಿಕ ಮಹತ್ವವಿಲ್ಲ ಎಂಬುದಾಗಿ ಚೀನಾ ಎರಡು ವರ್ಷಗಳ ಹಿಂದೆ ಘೋಷಿಸಿತ್ತು.

ಆದರೆ, ಈ ಘೋಷಣೆ ಈಗಲೂ ಚಾಲ್ತಿಯಲ್ಲಿದೆ ಹಾಗೂ ಅದು ಕಾನೂನುಬದ್ಧ ಒಪ್ಪಂದವಾಗಿದೆ ಹಾಗೂ ಅದನ್ನು ಎತ್ತಿಹಿಡಿಯಲು ತಾನು ಈಗಲೂ ಬದ್ಧವಾಗಿದ್ದೇನೆ ಎಂಬುದಾಗಿ ಬ್ರಿಟನ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News