ಗೋಕಳ್ಳತನ ಮುಂದುವರಿದರೆ ‘ಬೆತ್ತಲೆ ಪ್ರಕರಣ’ ಮರುಕಳಿಸಬಹುದು ಎಂದ ಬಿಜೆಪಿ ಮುಖಂಡ ಯಶ್ಪಾಲ್ ಸುವರ್ಣ

Update: 2019-07-02 15:12 GMT

ಉಡುಪಿ, ಜು.2: ಕರಾವಳಿಯ ಗ್ರಾಮೀಣ ಪ್ರದೇಶಗಳಲ್ಲಿ ಗೋಕಳ್ಳತನದ ಪ್ರಕರಣಗಳು ಹೆಚ್ಚುತ್ತಿದ್ದು, ಇದಕ್ಕೆ ರಾಜ್ಯ ಸರಕಾರ ಮತ್ತು ಪೊಲೀಸ್ ಇಲಾಖೆಯ ವೈಫಲ್ಯವೇ ಕಾರಣವಾಗಿದೆ. ಸರಕಾರದ ನಿರ್ಲಕ್ಷ್ಯ ಇದೇ ರೀತಿ ಮುಂದುವರಿದರೆ ಜಿಲ್ಲೆಯಲ್ಲಿ 2005ರಲ್ಲಿ ಕಂಡುಬಂದ ತೀವ್ರ ತರವಾದ ಹೋರಾಟಗಳು ಮತ್ತೆ ಮರುಕಳಿಸಬಹುದು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ ಹೇಳಿದ್ದು, ವಿವಾದ ಸೃಷ್ಟಿಸಿದ್ದಾರೆ. 2005ರಲ್ಲಿ ರಾಷ್ಟ್ರಮಟ್ಟದಲ್ಲಿ ಕುಖ್ಯಾತಿ ಗಳಿಸಿದ ‘ಆದಿ ಉಡುಪಿ ಬೆತ್ತಲೆ ಪ್ರಕರಣ’ ನಡೆದಿತ್ತು.

ಮುಖ್ಯಮಂತ್ರಿ ಕುಮಾರಸ್ವಾಮಿಗೆ ಜನರ ಬಗ್ಗೆ ಕಾಳಜಿ ಇದ್ದರೆ ಕರಾವಳಿಗೆ ಬಂದು ಹೈನುಗಾರರ ಸಮಸ್ಯೆಗಳನ್ನು ಆಲಿಸಲಿ. ಇಲ್ಲಿ ಹಸು ಸಾಕಿಕೊಂಡಿರುವವರು ರಾತ್ರಿ ಹೊತ್ತು ಭಯದಲ್ಲೇ ಬದುಕುವಂತಾಗಿದೆ. ಮಾರಕಾಸ್ತ್ರಗಳೊಂದಿಗೆ ಗೋವುಗಳನ್ನು ದರೋಡೆ ಮಾಡುತ್ತಿರುವ ದುಷ್ಕರ್ಮಿಗಳಿಗೆ ರಾಜಕೀಯ ಪಕ್ಷಗಳ ಬೆಂಬಲವಿದೆ ಎಂದು ಯಶ್ಪಾಲ್ ಸುವರ್ಣ ಆರೋಪಿಸಿದರು.

ಗೋರಕ್ಷಣೆಗಾಗಿ ಒಂದಷ್ಟು ಯುವಕರು ಮುಂದಾದರೆ ಅವರ ಮೇಲೆ ಗೂಂಡಾ ಕಾಯ್ದೆ ಹಾಕಿ ಸುಮ್ಮನಾಗಿಸುವ ಕೆಲಸ ನಡೆಯುತ್ತಿದೆ. ದನಗಳ್ಳರು ಒಂದು ವರ್ಗಕ್ಕೆ ಸೇರಿದವರು ಎಂಬ ಏಕೈಕ ಕಾರಣಕ್ಕಾಗಿ ಇಡೀ ವ್ಯವಸ್ಥೆ ಇಂದು ದನಗಳ್ಳರ ಪರವಾಗಿ ನಿಂತಂತೆ ಕಾಣುತ್ತಿದೆ. ಪೊಲೀಸ್ ಇಲಾಖೆಗೆ ಶಾಂತಿ ಸುವ್ಯವಸ್ಥೆಯ ಕಾಳಜಿ ಇದ್ದರೆ ಕೂಡಲೇ ಅಕ್ರಮ ಕಸಾಯಿಖಾನೆಗಳನ್ನು ಪತ್ತೆ ಹಚ್ಚಿ ಮುಚ್ಚಬೇಕು. ಗೋಸಾಗಾಟದಲ್ಲಿ ಸಕ್ರಿಯರಾಗಿರುವ ದರೋಡೆಕೋರರನ್ನು ಬಂಧಿಸಿ ಗಡಿಪಾರು ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಗೋ ಕಳ್ಳತನದ ಬಗ್ಗೆ ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತಗಳು ಗಂಭೀರ ಕ್ರಮ ಕೈಗೊಳ್ಳದೇ ಹೋದರೆ 2003ರಿಂದ 2005ರವರೆಗೆ ಕರಾವಳಿಯಲ್ಲಿ ಕಾಣಿಸಿಕೊಂಡಿದ್ದ ಪ್ರಕ್ಷುಬ್ಧ ವಾತಾವರಣ ಮತ್ತೆ ತಲೆ ಎತ್ತಬಹುದು. ಇದಕ್ಕೆ ಇಲಾಖೆ ಅವಕಾಶ ಮಾಡಿಕೊಡಬಾರದು ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News