ಅಮಲು ಪದಾರ್ಥ ಸೇವನೆ ರೋಗಕ್ಕೆ ಚಿಕಿತ್ಸೆ ಮುಖ್ಯ: ಫಾ.ಮಸ್ಕರೇನ್ಹಸ್

Update: 2019-07-02 15:13 GMT

 ಶಿರ್ವ, ಜು.2: ವ್ಯಕ್ತಿಗಳನ್ನು ಮದ್ಯದ ಚಟದಿಂದ ಬಿಡಿಸಿ ಮುಖ್ಯವಾಹಿನಿಗೆ ತರುವುದು ಪುಣ್ಯದ ಕಾರ್ಯ. ಈ ಸೇವೆಯೂ ದೇವರ ಪೂಜೆಯಾಗಿದೆ. ಅಮಲು ಪದಾರ್ಥ ಸೇವನೆ ಒಂದು ರೋಗವಾಗಿದ್ದು ಅದನ್ನು ಚಿಕಿತ್ಸೆಯಿಂದ ಗುಣಪಡಿಸಲು ಸಾಧ್ಯ ಎಂದು ಮೂಡುಬೆಳ್ಳೆ ಸಂತ ಲಾರೆನ್ಸ್ ಧರ್ಮಕೇಂದ್ರದ ಪ್ರಧಾನ ಧರ್ಮಗುರು ರೆ.ಫಾ.ಕ್ಲೆಮೆಂಟ್ ಮಸ್ಕರೇನ್ಹಸ್ ಹೇಳಿದ್ದಾರೆ.

ಉಡುಪಿ ತಾಲೂಕು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್, ಬೆಳ್ತಂಗಡಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಮೂಡುಬೆಳ್ಳೆ ಮದ್ಯವರ್ಜನ ವ್ಯವಸ್ಥಪನಾ ಸಮಿತಿ ಹಾಗೂ ಮೂಡುಬೆಳ್ಳೆಯ ವಿವಿಧ ಸಾಮಾಜಿಕ ಸೇವಾ ಸಂಘಟನೆಗಳ ಸಹಭಾಗಿತ್ವದಲ್ಲಿ ಎಂಟು ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ 1356ನೇ ಮದ್ಯವರ್ಜನ ಶಿಬಿರವನ್ನು ಮಂಗಳವಾರ ಮೂಡುಬೆಳ್ಳೆ ಲಯನ್ಸ್ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಜಿಲ್ಲಾ ನಿರ್ದೇಶಕ ಗಣೇಶ್ ಬಿ. ಮಾತನಾಡಿ, ಮನೆಯ ಪರಿಸ್ಥಿತಿ, ಬಾಹ್ಯ ಒತ್ತಡ, ಸಹವಾಸ ದೋಷ, ಮಾನಸಿಕ ದೌರ್ಬಲ್ಯಗಳಿಂದ ಈ ಚಟಕ್ಕೆ ಬಲಿಯಾಗುತ್ತಿದ್ದು, ಇದರಿಂದ ಬಡತನ, ಕುಟುಂಬದಲ್ಲಿ ಅಶಾಂತಿ, ವ್ಯಕ್ತಿತ್ವ ನಾಶ, ವಿವಿಧ ರೋಗಗಳಿಗೆ ತುತ್ತಾಗಿ ಕೌಟುಂಬಿಕ ಜೀವನ ನಾಶವಾಗುತ್ತದೆ. ಇದನ್ನು ನಿಯಂತ್ರಿಸಲು ಮನೆಯ ಮಹಿಳೆಯರ ಪಾತ್ರ ಬಹುಮುಖ್ಯವಾಗಿದೆ ಎಂದರು.

ಅಧ್ಯಕ್ಷತೆಯನ್ನು ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷೆ ಸುಜಾತಾ ಸುವರ್ಣ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಡುಪಿ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಅಚ್ಯುತ ಪೂಜಾರಿ, ತಾಪಂ ಸದಸ್ಯೆ ಗೀತಾ ವಾಗ್ಲೆ, ಮೂಡುಬೆಳ್ಳೆ ಲಯನ್ಸ್ ಕ್ಲಬ್ ಅಧ್ಯಕ್ಷ ಐವನ್ ದಲ್ಮೇದಾ, ಬೆಳ್ಳೆ ಗ್ರಾಪಂ ಅಧ್ಯಕ್ಷೆ ರಂಜನಿ ಹೆಗ್ಡೆ, ಶಿರ್ವ ಗ್ರಾಪಂ ಸದಸ್ಯ ಕೆ.ಆರ್.ಪಾಟ್ಕರ್, ಮೂಡುಬೆಳ್ಳೆ ಪಾಣಾರ ಸಂಘದ ಅಧ್ಯಕ್ಷ ರಾಜು ಪಾಣಾರ, ವ್ಯವಸ್ಥಾಪನಾ ಸಮಿತಿ ಗೌರವ ಅಧ್ಯಕ್ಷ ಕೆ.ದೇವದಾಸ ಹೆಬ್ಬಾರ್, ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ನವೀನ್ ಅಮೀನ್ ಶಂಕರಪುರ ಉಪಸ್ಥಿತರಿದ್ದರು.

ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಡುಪಿ ತಾಲೂಕು ಯೋಜನಾಧಿಕಾರಿ ರೋಹಿತ್ ಎಚ್. ಸ್ವಾಗತಿಸಿದರು. ಉಡುಪಿ ಮೇಲ್ವಿಚಾರಕ ಭಾಸ್ಕರ್ ಹಾಗೂ ಶಿರ್ವ ಮೇಲ್ವಿಚಾರಕಿ ಪಲ್ಲವಿ ಕಾರ್ಯಕ್ರಮ ನಿರೂಪಿಸಿದರು. ಮಲ್ಲಾರು ಸೇವಾ ಪ್ರತಿನಿಧಿ ಸತ್ಯವತಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News