ಪಾಲಿಕೆ ಚುನಾವಣೆಗೆ ಸಜ್ಜಾಗಲು ಹರೀಶ್ ಕುಮಾರ್ ಕರೆ
ಮಂಗಳೂರು, ಜು.2: ಮಹಾನಗರ ಪಾಲಿಕೆ ಚುನಾವಣೆ ಶೀಘ್ರದಲ್ಲೇ ನಡೆಯಲಿರುವುದರಿಂದ ಕಾರ್ಯಕರ್ತರು, ಮಾಜಿ ಕಾರ್ಪೊರೇಟರ್‌ಗಳು ಸಜ್ಜಾಗುವುದರೊಂದಿಗೆ ಮತ್ತೆ ಪಾಲಿಕೆಯಲ್ಲಿ ಕಾಂಗ್ರೆಸ್ ಆಡಲಿತ ನಡೆಸಲು ಪ್ರಯತ್ನಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಕರೆ ನೀಡಿದರು.
ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ನಡೆದ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಲೋಕಸಭಾ ಚುನಾವಣೆಯ ಸೋಲಿನಿಂದ ಧೃತಿಗೆಡುವ ಅಗತ್ಯವಿಲ್ಲ. ಸೋಲು ಎಂದಿಗೂ ಶಾಶ್ವತವಲ್ಲ. ಕಾಂಗ್ರೆಸ್ ಮತ್ತೆ ಕಾರ್ಯಕರ್ತರ ಹುಮ್ಮಸ್ಸಿನೊಂದಿಗೆ ಫಿನೀಕ್ಷ್‌ನಂತೆ ಎದ್ದು ನಿಲ್ಲಲಿದೆ. ಮಂಗಳೂರು ದಕ್ಷಿಣ ಹಾಗೂ ಉತ್ತರ ವಿಧಾನಸಭಾ ಕ್ಷೇತ್ರದ ಜನರಿಗೆ ಕಾಂಗ್ರೆಸ್‌ನ ಅಪೂರ್ವ ಸಾಧನೆಗಳು ಮನವರಿಕೆಯಾಗುತ್ತಿದ್ದು, ಪಾಲಿಕೆಯಲ್ಲಿ ಪಕ್ಷವು ಜಯಭೇರಿ ಬಾರಿಸಲಿದೆ. ವಾರ್ಡ್ ಮಟ್ಟದಲ್ಲಿ ಪಕ್ಷದ ಸಂಘಟನೆಯು ಬಲಗೊಳ್ಳುತ್ತಿದ್ದು, ಕಾರ್ಯಕರ್ತರ ಹುರುಪು ಇಮ್ಮಡಿಯಾಗುತ್ತಿದೆ. ಬಿಜೆಪಿಯ ಪೊಳ್ಳು ಭರವಸೆಗಳು ಸತ್ಯಾಂಶವು ಬಯಲಾಗುತ್ತಿದ್ದು, ಜನತೆಯು ಬಿಜೆಪಿಯನ್ನು ಸಂಪೂರ್ಣ ತಿರಸ್ಕರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಸಭೆಯ ಆರಂಭದಲ್ಲಿ ಇತ್ತೀಚೆಗೆ ಅಗಲಿದ ಕಾಂಗ್ರೆಸ್ ಮುಖಂಡರಾದ ಡಿ.ಆರ್. ಕಾಮತ್, ಎಂ.ಸಂಜೀವ, ಸೀತಾರಾಮ ಶೆಟ್ಟಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಸಭೆಯಲ್ಲಿ ಮಾಜಿ ಶಾಸಕ ಜೆ.ಆರ್.ಲೋಬೊ, ಮಾಜಿ ಜಿಲ್ಲಾಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಿ.ಎಚ್. ಖಾದರ್, ದ.ಕ. ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಯು.ಕೆ.ಮೋನು, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮತ್ತಿತರ ಮುಖಂಡರು ಭಾಗವಹಿಸಿದ್ದರು.
ಜಿಲ್ಲಾಧ್ಯಕ್ಷ ಕೆ.ಹರೀಶ್ ಕುಮಾರ್ ಸ್ವಾಗತಿಸಿದರು. ಡಿಸಿಸಿ ಉಪಾಧ್ಯಕ್ಷ ಸದಾಶಿವ ಉಳ್ಳಾಲ್ ವಂದಿಸಿದರು.