ಮೊಗ್ಲಿಂಗ್ ಪತ್ರಿಕಾ ಅಕಾಡಮಿ ತೆರೆಯಲಿ: ಪ್ರೊ.ನಾವಡ

Update: 2019-07-02 15:30 GMT

ಮಂಗಳೂರು, ಜು.2: ಕನ್ನಡ ಸಾಹಿತ್ಯಕ್ಕೆ ರೆ.ಹರ್ಮನ್ ಮೊಗ್ಲಿಂಗ್ ಅವರ ಕೊಡುಗೆ ಅಪಾರ. ಮೊಗ್ಲಿಂಗ್ ಹೆಸರಲ್ಲಿ ಪತ್ರಿಕಾ ಅಕಾಡಮಿ ತೆರೆಯುವ ಅಗತ್ಯವಿದೆ ಎಂದು ಸಂಶೋಧಕ, ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಎ.ವಿ.ನಾವಡ ತಿಳಿಸಿದ್ದಾರೆ.

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಹಾಗೂ ಬಲ್ಮಠದ ಕಾಸೆಸ್ ಸಂಸ್ಥೆಗಳ ಸಹಯೋಗದಲ್ಲಿ ನಗರದ ಬಲ್ಮಠ ಸಹೋದಯದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾದ ‘ಪತ್ರಿಕಾ ದಿನಾಚರಣೆ; ಮೊಗ್ಲಿಂಗ್ ಸಂಸ್ಮರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದಿನ ಹಲವು ವಿಶ್ವವಿದ್ಯಾನಿಲಯಗಳಲ್ಲಿ ಸಂಶೋಧಕ ವಿದ್ಯಾರ್ಥಿಗಳು ಸೃಜನಶೀಲ ವಿಷಯಗಳನ್ನು ಆಯ್ದುಕೊಳ್ಳುತ್ತಿಲ್ಲ. ಸಣ್ಣ ಪುಟ್ಟ ವಿಷಯಗಳನ್ನು ಆಯ್ದುಕೊಂಡು ಅಂಕಗಳಿಗೋಸ್ಕರ ಟೊಳ್ಳಾದ ಸಂಶೋಧನೆಗಳು ನಡೆಯುತ್ತಿವೆ. ಪತ್ರಿಕೋದ್ಯಮಕ್ಕೆ ಅಪಾರ ಕೊಡುಗೆ ನೀಡಿದ ಮೊಗ್ಲಿಂಗ್ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆದಿಲ್ಲ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಮೊಗ್ಲಿಂಗ್ ಅವರ ವಿಷಯವನ್ನು ಆಯ್ದುಕೊಳ್ಳುವಂತಾಗಲಿ ಎಂದು ಅವರು ಆಶಿಸಿದರು.

ಕಿಟ್ಟೆಲ್, ಮೊಗ್ಲಿಂಗ್ ಅವರಂತಹ ಬಗ್ಗೆ ಸಂಶೋಧನೆ ಮಾಡುವ ಮೂಲಕ ಸೃಜನಶೀಲ ಸಾಹಿತ್ಯ ಹುಟ್ಟಿಹಾಕುವ ಅಗತ್ಯವಿದೆ. ಇಂದು ಕೇವಲ ಜನಪ್ರಿಯ ವಿಷಯಗಳು ಹಾಗೂ ಸರಳವಾಗಿರುವುದನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಸೃಜನಶೀಲತೆಯ ಕೊರತೆ ಕಾಣುತ್ತಿದೆ. ಯಾರೂ ನನ್ನ ಬಳಿ ಬರುತ್ತಿಲ್ಲ. ಅವರಿಗೆ ಬೇಕಾದ ಸರ್ವ ಮಾಹಿತಿಯನ್ನು ಕೊಡಲು ಸಿದ್ಧನಿದ್ದೇನೆ ಎಂದು ಹೇಳಿದರು.

ಮೊಗ್ಲಿಂಗ್ ಆಧುನಿಕ ಕರ್ನಾಟಕದ ಪತ್ರಿಕೋದ್ಯಮದ ಬೆಳ್ಳಿಚುಕ್ಕೆಯಾಗಿದ್ದಾರೆ. ಕನ್ನಡ ಸಾಹಿತ್ಯದ ಮಧ್ಯಕಾಲೀನ ಮತ್ತು ಆಧುನಿಕ ಸಾಹಿತ್ಯ ತಿಳಿದುಕೊಳ್ಳಲು ಸಾಧ್ಯವಾದ ಕೃತಿಗಳ ಮುದ್ರಣವು ಮೊಗ್ಲಿಂಗ್ ಅವರ ಕೊಡುಗೆಯಾಗಿದೆ. ಹಳೆಯ ಗ್ರಂಥಗಳನ್ನು ಸಂಪಾದನೆ ಮಾಡಿದ ಮೊದಲ ವ್ಯಕ್ತಿ ಮೊಗ್ಲಿಂಗ್ ಎಂದು ಅವರು ತಿಳಿಸಿದರು.

ಮೊಗ್ಲಿಂಗ್ ಮೊದಲ ಬಾರಿ 1836 ಡಿಸೆಂಬರ್ 6ರಂದು ಮಂಗಳೂರಿಗೆ ಆಗಮಿಸಿದಾಗ ಅವರನ್ನು ವೈಭವಯುತವಾಗಿ ಸ್ವಾಗತಿಸಲಾಯಿತು. ಆದರೆ ಅವರು ವೈಭವದ ಜೀವನವನ್ನು ತಿರಸ್ಕರಿಸಿದರು. ಮೊಗ್ಲಿಂಗ್ ಇಲ್ಲಿಗೆ ಬಂದ ಮರುದಿನವೇ ಸ್ಥಳೀಯರೊಂದಿಗೆ ಬೆರೆತುಕೊಂಟಡು ಸೇವೆಗೆ ಮುಂದಾದರು ಎಂದು ಹೇಳಿದರು.

ಧರ್ಮ ಪ್ರಚಾರಕ್ಕಾಗಿ ಬಂದಿದ್ದ ಮೊಗ್ಲಿಂಗ್, ಪತ್ರಿಕೋದ್ಯಮ, ಸಾಹಿತ್ಯಕ್ಕೆ ಕೊಡುಗೆ ನೀಡಿದರು. ‘ಮಂಗಳೂರು ಸಮಾಚಾರ’ ಪತ್ರಿಕೆ ಆರಂಭಿಸಿದರು. ಪತ್ರಿಕೆಯ ಯಾವುದೇ ಸಂಚಿಕೆಯನ್ನು ತೆರೆದು ನೋಡಿದರೂ ಅಲ್ಲಿರಲ್ಲಿ ಒಂದು ಸುದ್ದಿಯನ್ನೂ ಕ್ರೈಸ್ತ ಧರ್ಮವನ್ನು ಹೊಗಳಿ ಬರೆದಿಲ್ಲ. ಮೊಗ್ಲಿಂಗ್ ಪ್ರೆಸ್‌ನಲ್ಲಿ ದಾಸ ಸಾಹಿತ್ಯದ ಪುರಂದರದಾಸರು, ಕನಕದಾಸರ ಕೀರ್ತನೆಗಳು, ಜೈಮಿನಿ ಭಾರತ, ಬಸವ ಪುರಾಣ, ಚೆನ್ನಬಸವ ಪುರಾಣ, ಯಕ್ಷಗಾನ ಪ್ರಸಂಗಗಳನ್ನು ಪ್ರಕಟಿಸಿದರು ಎಂದು ವಿವರಿಸಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಸದಸ್ಯ ಬೆನೆಟ್ ಜಿ. ಅಮ್ಮನ್ನ ಮಾತನಾಡಿ, ಮಂಗಳೂರು ಸಮಾಚಾರ ಪತ್ರಿಕೆಯ ಇತಿಹಾಸವನ್ನು ಸಭಿಕರಲ್ಲಿ ತೆರೆದಿಟ್ಟರು. ಕಾರ್ಯಕ್ರಮದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ತಾರಾನಾಥ ಕಾಪಿಕಾಡ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ಹರೀಶ್ ಬಂಟ್ವಾಳ್, ಉಪಾಧ್ಯಕ್ಷ ಲಕ್ಷ್ಮಣ್ ಕುಂದರ್, ಕಾಸೆಸ್ ಕಾರ್ಯದರ್ಶಿ ವಂ.ಡಾ.ಹನಿ ಕಬ್ರಾಲ್, ಖಜಾಂಚಿ ವಂ.ಸಾಗರ್ ಸುಂದರರಾಜ್, ವಾರ್ತಾಧಿಕಾರಿ ಬಿ.ಎ.ಖಾದರ್ ಶಾ ಮತ್ತಿತರರಿದ್ದರು. ಈಶ್ವರ್ ವಾರಣಾಸಿ ಸ್ವಾಗತಿಸಿ, ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News